ಟವರ್ ನಿರ್ಮಾಣ ಕಾಮಗಾರಿಗೆ ತಾತ್ಕಾಲಿಕ ತಡೆ, ಇನ್ನಾ ಗ್ರಾಮಸ್ಥರಿಂದ ವಿರೋಧ ಕೆಲಸ ನಿಲ್ಲಿಸಿ ಸಿಬ್ಬಂದಿ ವಾಪಸ್

2 Min Read
inna
ಇನ್ನಾ ಉಕ್ಕುಡ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ವಿರೋಧಿಸಿ ಗುರುವಾರ ಸೇರಿದ ಗ್ರಾಮಸ್ಥರು

ಕಾರ್ಕಳ: ಉಡುಪಿಯ ಎಲ್ಲೂರು ಗ್ರಾಮದ ನಂದಿಕೂರಿನಿಂದ ಕೇರಳ ಕಾಸರಗೋಡಿಗೆ ವಿದ್ಯುತ್ ಸರಬರಾಜಿಗಾಗಿ ಟವರ್ ನಿರ್ಮಾಣ ಕಾಮಗಾರಿ ಜನವಿರೋಧದ ನಡುವೆಯೂ ಇನ್ನಾ ಗ್ರಾಮದಲ್ಲಿ ನಡೆಯುತ್ತಿದ್ದು, ಇದೀಗ ಕೊನೆಗೂ ಗ್ರಾಮಸ್ಥರ ಹೋರಾಟದ ಪರಿಣಾಮ ಗುರುವಾರ ಕಾಮಗಾರಿಗೆ ತಾತ್ಕಾಲಿಕ ತಡೆಯನ್ನು ನ್ಯಾಯಾಲಯ ನೀಡಿದೆ.

ಹಲವು ವರ್ಷಗಳಿಂದಲೂ ಇನ್ನಾ ಗ್ರಾಮದಲ್ಲಿ ವಿದ್ಯುತ್ ಸರಬರಾಜಿಗಾಗಿ ಟವರ್ ನಿರ್ಮಾಣಕ್ಕೆ ಸರ್ವೇ ಕಾರ್ಯ ನಡೆಯುತ್ತಿದ್ದು, ಗ್ರಾಮಸ್ಥರಿಂದ ಸಾಕಷ್ಟು ಹೋರಾಟ ಹಾಗೂ ಅಧಿಕಾರಿಗಳ ನಡುವೆ ತರಾಟೆ ನಡೆದಿತ್ತು. ಆದರೆ ಇತ್ತೀಚೆಗೆ ಇನ್ನಾ ಗ್ರಾಪಂ ವ್ಯಾಪ್ತಿಯ ಪಡುಇನ್ನಾ ಸಮೀಪದ ಅನ್ನೋಜಿಗೋಳಿ, ಇನ್ನಾ ಸರ್ಕಾರಿ ಶಾಲೆ ಬಳಿಯಲ್ಲಿ ಹಾಗೂ ಉಕ್ಕುಡ ಪ್ರದೇಶದಲ್ಲಿ ಖಾಸಗಿ ಜಮೀನಲ್ಲಿ ಕೃಷಿ ಗದ್ದೆಯಲ್ಲೇ ಟವರ್ ನಿರ್ಮಾಣಕ್ಕೆ ಜನವಿರೋಧದ ನಡುವೆಯೂ ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ಬೃಹತ್ ಹೊಂಡ ನಿರ್ಮಿಸಿ ಕಾಮಗಾರಿಗೆ ಮುಂದಾಗಿದ್ದರು. ಇದೀಗ ಗ್ರಾಮಸ್ಥರು ಕೋರ್ಟ್ ಮೆಟ್ಟಿಲು ಏರಿದ್ದು, ನ್ಯಾಯಾಲಯ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಿದೆ.

ಗುರುವಾರವೂ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಗ್ರಾಮಸ್ಥರು ಭೇಟಿ ಕಾಮಗಾರಿ ನಡೆಸದಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶವಿದೆ ಎಂದು ಕಂಪನಿ ಸಿಬ್ಬಂದಿ ಪೊಲೀಸರ ಸಹಕಾರದಲ್ಲಿ ಕಾಮಗಾರಿ ನಡೆಸುತ್ತಿದ್ದರೂ ಆ ಬಳಿಕ ಮಧ್ಯಾಹ್ನದ ವೇಳೆಗೆ ಕೋರ್ಟು ತಾತ್ಕಾಲಿಕ ತಡೆ ನೀಡಿದ ಹಿನ್ನೆಲೆ ಕಾಮಗಾರಿ ನಿಲ್ಲಿಸಿ ಸಿಬ್ಬಂದಿ ವಾಪಸ್ಸಾಗಿದ್ದಾರೆ.

ಘಟನಾ ಸ್ಥಳಕ್ಕೆ ಇನ್ನಾ ಗ್ರಾಮಕರಣಿಕ ಹನುಮಂತಪ್ಪ, ಜಿಪಂ ಮಾಜಿ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ಗ್ರಾಪಂ ಸದಸ್ಯ ದೀಪಕ್ ಕೋಟ್ಯಾನ್, ಚಂದ್ರಹಾಸ್ ಶೆಟ್ಟಿ, ಗ್ರಾಮಸ್ಥ ಅಮರನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಹೋರಾಟ ನಿರಂತರ

ಬಡಪಾಯಿ ಕೃಷಿಕ ದುಡಿದು ತಿನ್ನುತ್ತಿದ್ದ ಕೃಷಿಭೂಮಿಗೆ ಅಪಾರ ಹಾನಿಯಾಗುತ್ತಿದ್ದು ಯಾವುದೇ ಅಧಿಕಾರಿಗಳು ಪರಿಹಾರ ಬಿಡಿ, ಕೃಷಿಕರ ನೋವನ್ನು ಆಲಿಸುವ ಪ್ರಯತ್ನ ಇನ್ನೂ ಮಾಡಿಲ್ಲ. ಬರೀ ಕಂಪನಿ ಸಿಬ್ಬಂದಿ ನಿತ್ಯ ಉಡಾಫೆ ಮಾತುಗಳನ್ನಾಡುತ್ತ ಗ್ರಾಮಸ್ಥರನ್ನು ಗದರಿಸಿ ಕಾಮಗಾರಿ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಹಾಗೂ ಇಡೀ ಈ ಯೋಜನೆ ವಿರುದ್ಧ ನಮ್ಮ ಹೋರಾಟ ನಿರಂತರ ನಡೆಯಲಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರ್ಟಿನ ಆದೇಶದ ಮೇರೆಗೆ ಕಾಮಗಾರಿ ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
-ನರಸಪ್ಪ, ತಹಸೀಲ್ದಾರ್ ಕಾರ್ಕಳ

See also  ಬಾಲ್ಯವಿವಾಹ ತಡೆಗೆ ಅರಿವು ಮೂಡಿಸಿ
Share This Article