

ಮೂಲ್ಕಿ: ಇಲ್ಲಿನ ವಿಜಯ ಸನ್ನಿಧಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಳಿ ತ್ಯಾಜ್ಯ ಸಾಗಾಟದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಹೆದ್ದಾರಿ ದಾರಿದೀಪದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಟೆಂಪೋ ಚಾಲಕ ಕಾರ್ನಾಡ್ ನಿವಾಸಿ ಸಲ್ಮಾನ್ (35) ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು ಹೊರವಲಯದ ಬೈಕಂಪಾಡಿಯಿಂದ ಉಡುಪಿ ಕಡೆಗೆ ಕೋಳಿ ತ್ಯಾಜ್ಯ ಸಾಗಾಟ ಮಾಡುತ್ತಿದ್ದ ಟೆಂಪೋ ಮೂಲ್ಕಿ ಜಂಕ್ಷನ್ ತಲುಪುತ್ತಿದ್ದಂತೆ ಎದುರು ಬದಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಚಾಲಕ ಅಜಾಗರೂಕತೆಯಿಂದ ಚಲಿಸಿದ್ದು , ಟ್ಯಾಂಕರ್ ಜತೆ ಅಪಘಾತ ತಪ್ಪಿಸಲು ಯತ್ನಿಸಿದಾಗ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಹೆದ್ದಾರಿ ನಾಮ ಫಲಕ ಹಾಗೂ ದಾರಿದೀಪದ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಅಪಘಾತದ ರಭಸಕ್ಕೆ ಟೆಂಪೋ ಎದುರು ಭಾಗದ ಸಂಪೂರ್ಣ ಜಖಂಗೊಂಡಿದ್ದು ಚಾಲಕನಿಗೆ ಗಾಯಗಳಾಗಿವೆ. ಅಪಘಾತದಿಂದ ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು ಕೂಡಲೇ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಹೆದ್ದಾರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರೇನ್ ಮೂಲಕ ಅಪಘಾತಕ್ಕೀಡಾದ ಟೆಂಪೋವನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.