

ಬೆಂಗಳೂರಿನ ಭಾರತೀಯ ದೂರವಾಣಿ ಉದ್ಯಮ ನಿಗಮದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು. ಭಾರತೀಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬೆಂಗಳೂರಿನವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಐದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
ಹುದ್ದೆಗಳ ವಿವರ: ಕಾರ್ಪೋರೇಟ್ ವಿಜಿಲೆನ್ಸ್ ವಿಭಾಗದಲ್ಲಿ ಕೆಲಸ ಮಾಡಲು ಕನ್ಸಲ್ಟೆಂಟ್ಸ್-2, ಮೆಡಿಕಲ್ ಸರ್ವೀಸ್ (ಜಿಎಂ/ಎಜಿಎಂ)-1, ಜನರಲ್ ಮ್ಯಾನೇಜರ್ ಆರ್ ಆ್ಯಂಡ್ ಡಿ-1, ಮ್ಯಾನೇಜರ್/ಚೀಫ್ ಮ್ಯಾನೇಜರ್/ಮಟೀರಿಯಲ್ ಮ್ಯಾನೇಜ್ಮೆಂಟ್-3, ಮ್ಯಾನೇಜರ್ (ಡೇಟಾ ಸೆಂಟರ್)-1, ಮ್ಯಾನೇಜರ್ (ಸೈಬರ್ ಸೆಕ್ಯುರಿಟಿ)-1 ಮತ್ತು ಚೀಫ್ ಮ್ಯಾನೇಜರ್ (ಡೇಟಾ ಸೆಂಟರ್ ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್)-1 ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ: ಕನ್ಸಲ್ಟೆಂಟ್ಸ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಪಡೆದಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್/ಸ್ನಾತಕೋತ್ತರ ಪದವಿ/ಬಿಇ/ಎಂಬಿಎ/ಡಿಪ್ಲೊಮಾ ಪದವಿ ಕೇಳಲಾಗಿದೆ. ಸಾಮಾನ್ಯ ಅಭ್ಯರ್ಥಿಗೆ ಶೇ.60 ಅಂಕ ಕೇಳಲಾಗಿದ್ದು, ಮೀಸಲಾತಿ ಅಭ್ಯರ್ಥಿಗೆ ಅಂಕದಲ್ಲಿ ಸಡಿಲಿಕೆ ಇದೆ. ಎಲ್ಲ ಹುದ್ದೆಗಳಿಗೂ ನಾಲ್ಕರಿಂದ ಹತ್ತು ವರ್ಷ ವೃತ್ತಿ ಅನುಭವ ಕೇಳಲಾಗಿದೆ. ಹಾರ್ಡ್ವೇರ್, ಸಾಫ್ಟ್ವೇರ್, ನೆಟ್ವರ್ಕ್ ಸೇರಿ ಇತರ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗಿದೆ.
ವಯೋಮಿತಿ: ಕನ್ಸಲ್ಟೆಂಟ್ಸ್ ಹುದ್ದೆಗೆ 19.4.2022ಕ್ಕೆ ಅನ್ವಯವಾಗುವಂತೆ 62 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಉಳಿದ ಹುದ್ದೆಗಳಿಗೆ 40ರಿಂದ 52 ವರ್ಷ ವಯೋಮಿತಿ ಇದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗೆ 10 ವರ್ಷ ಮತ್ತು ಇತರ ಅಭ್ಯರ್ಥಿಗೆ 3 ವರ್ಷ ವಯೋಸಡಿಲಿಕೆ ಇದೆ.
ವೇತನ: ಕನ್ಸಲ್ಟೆಂಟ್ಸ್ಗಳಿಗೆ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಮತ್ತು ಹಳೆಯ ವೇತನದ ಆದಾರದ ಮೇಲೆ ಮಾಸಿಕ ವೇತನ ನಿಗದಿಪಡಿಸಲಾಗುವುದು. ಜಿಎಂ ಹುದ್ದೆಗೆ 1,04,898, ಎಜಿಎಂ ಹುದ್ದೆಗೆ 94,664, ಡಿಜಿಎಂಗೆ 89,547, ಸಿಎಂಆರ್ ಹುದ್ದೆಗೆ 81,872, ಮ್ಯಾನೇಜರ್ಗೆ 74, 196, ಡಿವೈ ಮ್ಯಾನೇಜರ್ಗೆ 66,521 ರೂ. ಮಾಸಿಕ ವೇತನದೊಂದಿಗೆ ಮೆಡಿಕಲ್, ಇನ್ಶುರೆನ್ಸ್, ಮ್ಯಾಗಜಿನ್, ಕ್ಯಾಂಟೀನ್ ಭತ್ಯೆ ಸೇರಿ ಇತರ ಸೌಲಭ್ಯ ಇರಲಿದೆ.
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನೇರವಾಗಿ ಬಂದ ಅರ್ಜಿ ಸ್ವೀಕರಿಸುವುದಿಲ್ಲ. ಹಾಗೂ ಅಪೂರ್ಣ ಅರ್ಜಿ, ದಾಖಲೆ ನೀಡದ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರ ಸಂಸ್ಥೆಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ: ಅರ್ಜಿದಾರರು ಉತ್ತಮ ಆರೋಗ್ಯ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯಿಂದ ಫಿಟ್ನೆಸ್ ಪರೀಕ್ಷೆ ನಡೆಸಿ ನಂತರ ನೇಮಕ ಮಾಡಿಕೊಳ್ಳಲಾಗುವುದು. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಮತ್ತು ವೃತ್ತಿ ಅನುಭವ ಆಧರಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 4.5.2022
ಮಾಹಿತಿಗೆ: https://itiltd.in/
ಅಧಿಸೂಚನೆಗೆ: https://bit.ly/36vyzKR, https://bit.ly/36vyRRZ