ಕಳುವಾದ ಮೊಬೈಲ್​ಗಳನ್ನು ಪತ್ತೆಹಚ್ಚುವಲ್ಲಿ ತೆಲಂಗಾಣ ಪೊಲೀಸರು ದೇಶಕ್ಕೆ ನಂ-2!

Telangana Police Phone
Published on

ನವದೆಹಲಿ: ಕಳುವಾದ ಅಥವಾ ಕಳೆದುಹೋದ ಮೊಬೈಲ್ ​ಫೋನ್‌ಗಳನ್ನು ಮರಳಿ ಪಡೆಯುವಲ್ಲಿ ತೆಲಂಗಾಣ ಪೊಲೀಸರು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ವರ್ಷದಲ್ಲಿ 21,193 ಮೊಬೈಲ್​ಗಳನ್ನು ಪತ್ತೆಮಾಡಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಜಿತೇಂದರ್ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದಲ್ಲಿನ 780 ಪೊಲೀಸ್ ಠಾಣೆಗಳಲ್ಲಿ ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (CIER) ಪೋರ್ಟಲ್ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ 2024ರಲ್ಲಿ ಕಳೆದುಹೋದ ಮೊಬೈಲ್ ಸಾಧನಗಳಲ್ಲಿ ಒಟ್ಟು 21,193 ಪೋನ್​ಗಳನ್ನು ಕೇವಲ 206 ದಿನಗಳಲ್ಲಿ ಪತ್ತೆಹಚ್ಚಲಾಗಿದೆ. ಅಲ್ಲದೆ, ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಒಟ್ಟಾರೆಯಾಗಿ ಒಂದು ದಿನಕ್ಕೆ 82 ಮೊಬೈಲ್‌ಗಳನ್ನು ಮರುಪಡೆಯಲಾಗುತ್ತಿದೆ ಎಂದು ಜಿತೇಂದರ್ ತಿಳಿಸಿದ್ದಾರೆ.

ದೂರ ಸಂಪರ್ಕ ಇಲಾಖೆಯೂ ಮೊಬೈಲ್ ಕಳ್ಳತನ ಮತ್ತು ನಕಲಿ ಮೊಬೈಲ್ ಸಾಧನಗಳ ಬೆದರಿಕೆಯನ್ನು ನಿಯಂತ್ರಿಸಲು CIER ಅನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಅನ್ನು ಅಧಿಕೃತವಾಗಿ ಮೇ 17, 2023 ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಯಿತು. ಆದರೆ, ಏಪ್ರಿಲ್ 19, 2023ರಿಂದಲೇ ತೆಲಂಗಾಣದಲ್ಲಿ ಪ್ರಾಯೋಗಿಕವಾಗಿ ಬಳಸಲಾಯಿತು ಎಂದು ಜಿತೇಂದರ್ ಮಾಹಿತಿ ನೀಡಿದರು.

ಕಳೆದುಹೋದ ಅಥವಾ ಕಳುವಾದ 10,000 ಮೊಬೈಲ್ ಫೋನ್‌ಗಳನ್ನು 189 ದಿನಗಳಲ್ಲಿ, 20,000 ಫೋನ್‌ಗಳನ್ನು 291 ದಿನಗಳಲ್ಲಿ, 30,000 ಫೋನ್‌ಗಳನ್ನು 395 ದಿನಗಳಲ್ಲಿ ಹಾಗೂ 37,000 ಫೋನ್‌ಗಳನ್ನು 459 ದಿನಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಹಾಗೂ ಈ CEIR ಪೋರ್ಟಲ್‌ಗೆ ನೋಡಲ್ ಅಧಿಕಾರಿಯಾಗಿ ಶಿಖಾ ಗೋಯೆಲ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ತೆಲಂಗಾಣದ ನಾಗರಿಕರಿಗೆ ಉತ್ತಮವಾದ ಸೇವೆ ಸಲ್ಲಿಸಲು ಹಾಗೂ ಮೊಬೈಲ್ ಬಳಕೆದಾರ ಸ್ನೇಹಪರತೆಯನ್ನು ಹೆಚ್ಚಿಸಲು ರಾಜ್ಯ ಪೊಲೀಸರು ದೂರ ಸಂಪರ್ಕ ಇಲಾಖೆ ಜೊತೆಗಿನ ಸಮನ್ವಯದ ಜೊತೆ CEIR ಪೋರ್ಟಲ್ ಅನ್ನು ತೆಲಂಗಾಣ ಪೊಲೀಸ್ ಸಿಟಿಜನ್ ಪೋರ್ಟಲ್‌ನೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದ್ದಾರೆ. ಹಾಗೆ ಕಳೆದುಕೊಂಡ ಮೊಬೈಲ್​ಗಳನ್ನು ವರದಿ ಮಾಡಲು ಜನಸಾಮಾನ್ಯರು ತೆಲಂಗಾಣ ಪೊಲೀಸ್ ಸಿಟಿಜನ್ ಪೋರ್ಟಲ್ ಸೇವೆಯನ್ನು ಬಳಸಿಕೊಳ್ಳಬೇಕು. ತಮ್ಮ ಮೊಬೈಲ್ ಸಾಧನಗಳನ್ನು ಕಳೆದುಕೊಂಡ ಜನರಿಗೆ ಇದು ಭರವಸೆಯ ದಾರಿದೀಪವಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net