

ನವದೆಹಲಿ: ಜಾಗತಿಕ ದೈತ್ಯ ತಂತ್ರಜ್ಞಾನ ಸಂಸ್ಥೆಯಾಗಿರುವ ಮೈಕ್ರೋಸಾಫ್ಟ್ ತನ್ನ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಶೇ. 25 ಕ್ಕಿಂತ ಹೆಚ್ಚು ಅಂದರೆ ಸುಮಾರು 60,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ್ದು, ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ( Microsoft Buyout Offer ) ಆಫರ್ ಮಾಡಿದೆ.
ಇತ್ತೀಚೆಗಷ್ಟೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಂಸ್ಥೆಯು, ಈಗ ಉದ್ಯೋಗಿಗಳಿಗೆ ತಾವಾಗಿಯೇ ಸಂಸ್ಥೆಯಿಂದ ಹೊರನಡೆಯಲು ಹಣಕಾಸಿನ ನೆರವು ಹಾಗೂ ಕ್ಯಾರಿಯರ್ ಪ್ಲಾನಿಂಗ್ ಬೆಂಬಲ ನೀಡುವುದಾಗಿ ತಿಳಿಸಿದೆ. ವಿಶೇಷವೆಂದರೆ ಈ ಬೈಔಟ್ ಕೊಡುಗೆ ಅನ್ವಯವಾಗುವ ಜಗತ್ತಿನ ಕೇವಲ ನಾಲ್ಕು ದೇಶಗಳಲ್ಲಿ ಭಾರತವೂ ಒಂದಾಗಿದ್ದು, ದೇಶಿಯ ಟೆಕ್ ವಲಯದಲ್ಲಿ ಈ ನಿರ್ಧಾರ ಭಾರಿ ಸಂಚಲನ ಮೂಡಿಸಿದೆ.
ಮೈಕ್ರೋಸಾಫ್ಟ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CPO) ಅಮಿ ಕೋಲ್‌ಮ್ಯಾನ್ ಅವರು ಸೋಮವಾರ ನೌಕರರಿಗೆ ರವಾನಿಸಿರುವ ಆಂತರಿಕ ಇಮೇಲ್ ಮೆಮೊದಲ್ಲಿ ಈ 'ವೋಲಂಟರಿ ಎಕ್ಸಿಟ್ ಆಫರ್' (VEO) ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮೈಕ್ರೋಸಾಫ್ಟ್‌ನಿಂದ ಹೊರಬಂದು ಹೊಸ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ನೌಕರರಿಗೆ ಗೌರವಯುತ ಹಾಗೂ ಆರ್ಥಿಕ ಭದ್ರತೆಯ ನಿರ್ಗಮನ ನೀಡಲು ಈ ಯೋಜನೆಯನ್ನು ತರಲಾಗಿದೆ ಎಂದು ತಿಳಿಸಿದ್ದಾರೆ. ಈ ಕೊಡುಗೆಗೆ ಒಪ್ಪಿಗೆ ಸೂಚಿಸಲು ಉದ್ಯೋಗಿಗಳಿಗೆ ಡಿಸೆಂಬರ್ ಮೊದಲ ವಾರದವರೆಗೆ ಕಾಲಾವಕಾಶ ನೀಡಲಾಗಿದ್ದು, ಆಯ್ಕೆ ಮಾಡಿಕೊಂಡ ಉದ್ಯೋಗಿಗಳು ಪ್ರಸ್ತುತ ವರ್ಷದ ಡಿಸೆಂಬರ್ ಕೊನೆಯ ವೇಳೆಗೆ ಸಂಸ್ಥೆಗೆ ವಿದಾಯ ಹೇಳಲಿದ್ದಾರೆ.
ಈ ಯೋಜನೆಯು ಅಮೆರಿಕ, ಕೆನಡಾ, ಯುನೈಟೆಡ್ ಕಿಂಗ್‌ಡಮ್ (UK) ಹಾಗೂ ಭಾರತದಲ್ಲಿರುವ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಶ್ರೇಣಿಯ ಅರ್ಹ ನೌಕರರಿಗೆ ಅನ್ವಯವಾಗಲಿದೆ. ಇದರಲ್ಲಿ ಸಾಮಾನ್ಯ ಮ್ಯಾನೇಜರ್‌ಗಳು ಹಾಗೂ ಕೆಲವು ಉಪಾಧ್ಯಕ್ಷರ ಹಂತದ ನೌಕರರು ಸೇರಿದ್ದಾರೆ. ಈ ಹಿಂದೆ ಕಂಪನಿ ಪರಿಚಯಿಸಿದ್ದ ನಿವೃತ್ತಿ ಬೈಔಟ್ ಯೋಜನೆಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಇಲ್ಲಿ ಯಾವುದೇ ವಯಸ್ಸಿನ ಮಿತಿ, ಸೇವಾ ಅವಧಿಯ ನಿಬಂಧನೆ ಅಥವಾ ನೌಕರರ ಕಾರ್ಯಕ್ಷಮತೆಯ ಮಾನದಂಡಗಳನ್ನು ಅನ್ವಯಿಸಲಾಗಿಲ್ಲ. ಸಂಪೂರ್ಣವಾಗಿ ನೌಕರರ ಸ್ವಯಂಪ್ರೇರಿತ ನಿರ್ಧಾರಕ್ಕೆ ಇದನ್ನು ಬಿಡಲಾಗಿದೆ.
ಆದಾಗ್ಯೂ, ಲೆವೆಲ್ 70 ಅಥವಾ ಕೆಳಗಿನ ಶ್ರೇಣಿಯಲ್ಲಿರುವ ಪ್ರತಿಯೊಬ್ಬ ನೌಕರನಿಗೂ ಈ ಆಫರ್ ಲಭ್ಯವಿರುವುದಿಲ್ಲ. ಯಾವ ವಿಭಾಗಗಳು ಇದರಲ್ಲಿ ಭಾಗವಹಿಸಬೇಕು ಎಂಬುದನ್ನು ಆಯಾ ಉದ್ಯಮ ವಿಭಾಗದ ಮುಖ್ಯಸ್ಥರ ನಿರ್ಧಾರಕ್ಕೆ ಬಿಡಲಾಗಿದೆ. ಪ್ರಸ್ತುತ ಎಐ ಎಕ್ಸ್‌ಪೀರಿಯನ್ಸ್, ಕೊಪೈಲಟ್ (Copilot), ಕೋರ್ ಎಐ, ವಿಂಡೋಸ್ + ಡಿವೈಸಸ್, ಎಕ್ಸ್‌ಬಾಕ್ಸ್, ಫೈನಾನ್ಸ್ ಹಾಗೂ ಹ್ಯೂಮನ್ ರಿಸೋರ್ಸ್ (HR) ವಿಭಾಗದ ಉದ್ಯೋಗಿಗಳಿಗೆ ಈ ಆಫರ್ ಸಿಗಲಿದೆ. ಕ್ಲೌಡ್ + ಎಐ ಮತ್ತು ಮೈಕ್ರೋಸಾಫ್ಟ್ ಎಐ ವಿಭಾಗಗಳಲ್ಲಿ ಭಾಗಶಃ ಅವಕಾಶ ಕಲ್ಪಿಸಲಾಗಿದ್ದು, ಸೇಲ್ಸ್, ಮಾರ್ಕೆಟಿಂಗ್, ಸೆಕ್ಯುರಿಟಿ ಹಾಗೂ ಕ್ವಾಂಟಮ್ ತಂಡಗಳನ್ನು ಈ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.
ಈ ಸ್ವಯಂಪ್ರೇರಿತ ನಿರ್ಗಮನ ಯೋಜನೆಯಡಿ ನೌಕರರು ಪಡೆಯುವ ಪರಿಹಾರವು ಮೈಕ್ರೋಸಾಫ್ಟ್‌ನ ಪ್ರಮಾಣಿತ ಸೆವೆರೆನ್ಸ್ ನಿಯಮಗಳನ್ನೇ ಹೋಲುತ್ತದೆ. ಅರ್ಹ ನೌಕರರು ತಮ್ಮ ಸೇವಾ ಅವಧಿ ಮತ್ತು ಹಿರಿತನದ ಆಧಾರದ ಮೇಲೆ ಗರಿಷ್ಠ 39 ವಾರಗಳ ಮೂಲ ವೇತನವನ್ನು ಪರಿಹಾರವಾಗಿ ಪಡೆಯಲಿದ್ದಾರೆ. ಇದರೊಂದಿಗೆ ಮುಂದುವರಿದ ಸ್ಟಾಕ್ ವೆಸ್ಟಿಂಗ್, ನಿರ್ದಿಷ್ಟ ಅವಧಿಯವರೆಗೆ ಉಚಿತ ಆರೋಗ್ಯ ವಿಮೆ ಹಾಗೂ ಹೊಸ ಕೆಲಸ ಹುಡುಕಿಕೊಳ್ಳಲು ಅಗತ್ಯವಿರುವ ಔಟ್‌ಪ್ಲೇಸ್‌ಮೆಂಟ್ ತರಬೇತಿ ಸೇವೆಗಳನ್ನು ಕಂಪನಿ ಒದಗಿಸಲಿದೆ. ಭಾರತ ಸೇರಿದಂತೆ ಎಲ್ಲಾ ಅರ್ಹ ನೌಕರರಿಗೆ ಅವರ ವೈಯಕ್ತಿಕ ಪ್ಯಾಕೇಜ್ ವಿವರಗಳನ್ನು ಇಮೇಲ್ ಮೂಲಕ ಕಳುಹಿಸಿಕೊಡಲಾಗುತ್ತಿದೆ.
2026ರ ಸಾಲಿನಲ್ಲಿ ಮೈಕ್ರೋಸಾಫ್ಟ್ ಕೈಗೊಂಡಿರುವ ಎರಡನೇ ಬೃಹತ್ ಬೈಔಟ್ ಕಾರ್ಯಕ್ರಮ ಇದಾಗಿದೆ. ಇದಕ್ಕೂ ಮೊದಲು ವಸಂತ ಋತುವಿನಲ್ಲಿ 'ಸ್ವಯಂಪ್ರೇರಿತ ನಿವೃತ್ತಿ ಕಾರ್ಯಕ್ರಮ' (VRP) ಮೂಲಕ 8,750 ಕ್ಕೂ ಹೆಚ್ಚು ಜೇಷ್ಠ ನೌಕರರಿಗೆ ಆಫರ್ ನೀಡಲಾಗಿತ್ತು. ಆ ಸಮಯದಲ್ಲಿ ಸುಮಾರು ಶೇ. 30 ರಷ್ಟು ನೌಕರರು ಅದನ್ನು ಸ್ವೀಕರಿಸಿದ್ದರು ಮತ್ತು ಕಂಪನಿಯು ಇದಕ್ಕಾಗಿ 900 ಮಿಲಿಯನ್ ಡಾಲರ್ ವೆಚ್ಚ ಮಾಡಬೇಕಾಯಿತು. ಅದಾಗ್ಯೂ ಜುಲೈ ತಿಂಗಳಿನಲ್ಲಿ ಸಂಸ್ಥೆಯು 4,800 ಉದ್ಯೋಗಿಗಳನ್ನು ನೇರವಾಗಿ ವಜಾಗೊಳಿಸಿತ್ತು, ಹಾಗೂ ಸೆಪ್ಟೆಂಬರ್‌ನಲ್ಲೂ ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಮೈಕ್ರೋಸಾಫ್ಟ್ ಭಾರಿ ಪ್ರಮಾಣದಲ್ಲಿ ನೌಕರರ ಕಡಿತಕ್ಕೆ ಮುಂದಾಗುತ್ತಿದೆ. 2025 ರಲ್ಲೇ 15,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆದುಹಾಕಲಾಗಿತ್ತು. ಪ್ರಸ್ತುತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ, ಡೇಟಾ ಸೆಂಟರ್‌ಗಳು ಹಾಗೂ ಎಐ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಂಪನಿಯು ಕೋಟ್ಯಂತರ ಡಾಲರ್ ಬಂಡವಾಳ ಹೂಡಿಕೆ ಮಾಡುತ್ತಿದೆ. ಈ ದೈತ್ಯ ವೆಚ್ಚಗಳನ್ನು ಸರಿದೂಗಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಸಂಸ್ಥೆಯು ಇಂತಹ ಕಠಿಣ ಕ್ರಮಗಳಿಗೆ ಮುಂದಾಗಿದೆ. ಈ ಬೈಔಟ್ ಆಫರ್‌ಗಳು ಭವಿಷ್ಯದ ಲೇ-ಆಫ್‌ಗಳಿಗೆ ಬದಲಿಯಲ್ಲ, ವ್ಯಾಪಾರದ ಸ್ಥಿತಿಗತಿಗೆ ತಕ್ಕಂತೆ ಮುಂದೆಯೂ ವಜಾಗೊಳಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ತಮ್ಮ ಸುದೀರ್ಘ ಮೆಮೊದಲ್ಲಿ ಎಚ್‌ಆರ್ ಮುಖ್ಯಸ್ಥೆ ಅಮಿ ಕೋಲ್‌ಮ್ಯಾನ್, "ಸ್ವಯಂಪ್ರೇರಿತ ನಿರ್ಗಮನ ಕೊಡುಗೆ ನಮಗೆ ಹೊಸ ಪ್ರಯೋಗವಾಗಿದೆ. ಈ ಯೋಜನೆಯಿಂದ ನಾವು ಹಲವು ವಿಷಯಗಳನ್ನು ಕಲಿಯಲಿದ್ದೇವೆ. ಬದಲಾಗುತ್ತಿರುವ ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ನಮ್ಮ ಕಾರ್ಯಪಡೆಯನ್ನು ಮರುಸಂಘಟಿಸಲು ಹಾಗೂ ನೌಕರರು ತಮ್ಮ ಮುಂದಿನ ಹಾದಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವುದು ನಮ್ಮ ಮುಖ್ಯ ಉದ್ದೇಶ ಎಂದು ಉಲ್ಲೇಖಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಈ ಬೈಔಟ್ ಪ್ರಕ್ರಿಯೆಯಿಂದ ಕಂಪನಿಗೆ ಉಂಟಾಗುವ ಹಣಕಾಸಿನ ವೆಚ್ಚದ ಸ್ಪಷ್ಟ ಚಿತ್ರಣವು ಮುಂಬರುವ ತ್ರೈಮಾಸಿಕ ಆರ್ಥಿಕ ವರದಿಗಳ ವೇಳೆಗೆ ಹೊರಬೀಳುವ ಸಾಧ್ಯತೆಯಿದೆ, (ಏಜೆನ್ಸೀಸ್).