

ಬೆಂಗಳೂರು : ತಂತ್ರಜ್ಞಾನ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಕ್ಕೂ ದೊರೆಯಬೇಕೆಂಬ ಉದ್ದೇಶದಿಂದ ಕಿಯೋನಿಕ್ಸ್ ಎಐ ಆಧಾರಿತ ಕಿಯೋ ಕಂಪ್ಯೂಟರ್‌ಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ( ಕಿಯೋನಿಕ್ಸ್) ದ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದ್ದು, ಕರ್ನಾಟಕವನ್ನು ಭವಿಷ್ಯದ ದೃಷ್ಟಿಯಿಂದ ರೂಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಹಾರ್ಡ್‌ವೇರ್, ಮ್ಯಾನುಫ್ಯಾಕ್ಚರಿಂಗ್ ಹಾಗೂ ಸ್ಟಾರ್ಟಪ್ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕರ್ನಾಟಕ ಯಾವಾಗಲೂ ಭವಿಷ್ಯದ ರಾಜ್ಯ ಎಂದು ಗುರುತಿಸಿಕೊಂಡಿದೆ. ಆ ಹೆಗ್ಗಳಿಕೆಯ ಹಿಂದೆ ಕಿಯೋನಿಕ್ಸೃ್ ಪಾತ್ರ ಪ್ರಮುಖವಾಗಿದೆ. 50 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಸ್ಥೆ ಅಂದು ಕೈಗೊಂಡ ನಿರ್ಧಾರ ಮತ್ತು ಕಾರ್ಯಗಳಿಂದ ರಾಜ್ಯಕ್ಕೆ ವಿಶ್ವಮನ್ನಣೆ ದೊರೆತಿದೆ. ಭವಿಷ್ಯದ ಅಗತ್ಯಗಳನ್ನು ಗುರುತಿಸಿ, ದೂರದೃಷ್ಟಿಯಿಂದ ಯೋಜನೆ ರೂಪಿಸಿ, ಮುಂದಿನ ತಲೆಮಾರಿಗೆ ಉದ್ಯೋಗ ಮತ್ತು ಉದ್ಯಮಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಪೂರ್ಣ ಸಹಕಾರದೊಂದಿಗೆ ಕೆಲಸ ಮಾಡಲಿದೆ ಎಂದು ಸಿಎಂ ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಇಂದು ಎಲ್ಲ ಕ್ಷೇತ್ರಗಳಲ್ಲಿ ಪ್ರವೇಶ ಮಾಡಿದೆ. ಎಐ ಕೇವಲ ದೊಡ್ಡ ತಂತ್ರಜ್ಞಾನ ಕಂಪನಿಗಳಿಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಬ್ಬ ವಿದ್ಯಾರ್ಥಿ, ಯುವಕ-ಯುವತಿ ಹಾಗೂ ಉದ್ಯಮಿಗೆ ತಂತ್ರಜ್ಞಾನದ ಪ್ರಯೋಜನ ತಲುಪಬೇಕು ಎಂದರು.
ಕಿಯೋನಿಕ್ಸ್ ಸ್ಥಾಪನೆಯ ಹಿಂದೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದೂರದೃಷ್ಟಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಆರ್.ಕೆ.ಬಾಳಿಗ ಅವರ ಕೊಡುಗೆಯನ್ನು ಸಿಎಂ ಇದೇ ವೇಳೆ ಸ್ಮರಿಸಿದರು.
ಸಮಾರಂಭದಲ್ಲಿ ಆರ್.ಕೆ.ಬಾಳಿಗ ಅವರ ಪ್ರತಿಮೆ ಅನಾವರಣ, ಸಂಸ್ಥೆಯ ನೂತನ ಲೋಗೋ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಐಟಿ ಬಿಟಿ ಮತ್ತು ಗೃಹ ಸಚಿವ ಪ್ರಿಯಾಂಕ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಾ. ಮಂಜುಳ, ಕಿಯೋನಿಕ್ಸ್ ಎಂ.ಡಿ.ಡಾ.ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು.