ಹೊಸ ಫೋನ್ ಖರೀದಿಸಿದ್ದೀರಾ? ಕೂಡಲೇ ಈ 5 ಸೆಟ್ಟಿಂಗ್ಸ್ ಬದಲಿಸಿ; ಇಲ್ಲದಿದ್ರೆ ನಿಮ್ಮ ಡೇಟಾ ಕ್ಷಣಾರ್ಧದಲ್ಲಿ ಮಂಗಮಾಯ!

Smartphone
Smartphone
Published on
ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್(SmartphoneTips) ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ, ಅದು ನಮ್ಮ ಬ್ಯಾಂಕ್ ವಿವರಗಳು, ಫೋಟೋಗಳು ಮತ್ತು ವೈಯಕ್ತಿಕ ಮಾಹಿತಿಯ ಭಂಡಾರವಾಗಿದೆ. ಸಾಮಾನ್ಯವಾಗಿ ಜನರು ಹೊಸ ಫೋನ್ ಖರೀದಿಸಿದ ತಕ್ಷಣ ಕ್ಯಾಮೆರಾ ಮತ್ತು ಆ್ಯಪ್‌ಗಳ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಆದರೆ, ಪ್ರಮುಖ ಭದ್ರತಾ ಸೆಟ್ಟಿಂಗ್‌ಗಳನ್ನು ನಿರ್ಲಕ್ಷಿಸುತ್ತಾರೆ. ಈ ಸಣ್ಣ ನಿರ್ಲಕ್ಷ್ಯವೇ ಸೈಬರ್ ಕಳ್ಳರಿಗೆ ದಾರಿಯಾಗಬಹುದು ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಎಚ್ಚರಿಸಿದೆ.

ಹೊಸ ಫೋನ್ ಕೈ ಸೇರಿದ ತಕ್ಷಣ ನೀವು ಮಾಡಬೇಕಾದ 5 ಪ್ರಮುಖ ಬದಲಾವಣೆಗಳು ಇಲ್ಲಿವೆ

1. 'ಫೈಂಡ್ ಮೈ ಡಿವೈಸ್' (Find My Device) ಆನ್ ಮಾಡಿ
ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಅದನ್ನು ಹುಡುಕಲು ಇದು ಮೊದಲ ಆಯುಧ. ಆಂಡ್ರಾಯ್ಡ್ ಬಳಕೆದಾರರು ಸೆಟ್ಟಿಂಗ್ಸ್‌ನಲ್ಲಿ ಈ ಫೀಚರ್ ಆನ್ ಮಾಡಿಕೊಳ್ಳಬೇಕು (ಐಫೋನ್‌ನಲ್ಲಿ ಇದು ಮೊದಲೇ ಇರುತ್ತದೆ). ಇದರ ಮೂಲಕ ನೀವು ದೂರದಲ್ಲಿದ್ದೇ ಫೋನ್ ಲಾಕ್ ಮಾಡಬಹುದು ಅಥವಾ ಡೇಟಾ ಅಳಿಸಿ ಹಾಕಬಹುದು.
2. ರಿಮೋಟ್ ಲಾಕ್ ಮತ್ತು ಆಫ್‌ಲೈನ್ ಟ್ರ್ಯಾಕಿಂಗ್
ಕಳ್ಳರು ಮೊದಲು ಮಾಡುವುದೇ ಫೋನ್ ಸ್ವಿಚ್ ಆಫ್ ಮಾಡುವುದು ಅಥವಾ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವುದು. ಇದನ್ನು ತಡೆಯಲು ಆಫ್‌ಲೈನ್ ಟ್ರ್ಯಾಕಿಂಗ್ ಆನ್ ಮಾಡಿ. ಇದರಿಂದ ಫೋನ್ ನೆಟ್‌ವರ್ಕ್ ಇಲ್ಲದಿದ್ದರೂ ಅದರ ಲೊಕೇಶನ್ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
3. ಲಾಕ್ ಸ್ಕ್ರೀನ್ ಅಧಿಸೂಚನೆ (Notification) ಗೌಪ್ಯತೆ
ನಿಮ್ಮ ಫೋನ್ ಲಾಕ್ ಆಗಿದ್ದರೂ ಸ್ಕ್ರೀನ್ ಮೇಲೆ ಬರುವ OTP ಅಥವಾ ಬ್ಯಾಂಕ್ ಸಂದೇಶಗಳನ್ನು ಬೇರೆಯವರು ನೋಡುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು 'Lock Screen Notification' ಸೆಟ್ಟಿಂಗ್‌ಗೆ ಹೋಗಿ 'Hide Sensitive Content' ಆಯ್ಕೆಯನ್ನು ಆರಿಸಿಕೊಳ್ಳಿ.
4. ಪವರ್ ಆಫ್ ಮಾಡಲು ಪಾಸ್‌ವರ್ಡ್ ಕಡ್ಡಾಯಗೊಳಿಸಿ
ಈಗಿನ ರಿಯಲ್‌ಮಿ, ಒಪ್ಪೋ ಮತ್ತು ಒನ್‌ಪ್ಲಸ್‌ನಂತಹ ಫೋನ್‌ಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡುವಾಗಲೂ ಪಾಸ್‌ವರ್ಡ್ ಕೇಳುವ ಆಯ್ಕೆ ಇದೆ. ಇದನ್ನು ಆನ್ ಮಾಡುವುದರಿಂದ, ನಿಮ್ಮ ಅನುಮತಿಯಿಲ್ಲದೆ ಯಾರೂ ಫೋನ್ ಆಫ್ ಮಾಡಲು ಸಾಧ್ಯವಿಲ್ಲ. ಇದರಿಂದ ಫೋನ್ ಟ್ರ್ಯಾಕಿಂಗ್ ಸತತವಾಗಿ ನಡೆಯುತ್ತಿರುತ್ತದೆ.
5. ಸಿಮ್ ಲಾಕ್ (SIM Lock) ವೈಶಿಷ್ಟ್ಯ ಬಳಸಿ
ಇತ್ತೀಚೆಗೆ 'ಸಿಮ್ ಸ್ವಾಪ್' ವಂಚನೆಗಳು ಹೆಚ್ಚುತ್ತಿವೆ. ನಿಮ್ಮ ಸಿಮ್ ಅನ್ನು ತೆಗೆದು ಬೇರೆ ಫೋನ್‌ನಲ್ಲಿ ಹಾಕಿ ವಂಚಿಸದಂತೆ ತಡೆಯಲು ಸಿಮ್ ಕಾರ್ಡ್‌ಗೆ ಪಿನ್ (PIN) ಸೆಟ್ ಮಾಡಿ. ಇದರಿಂದ ನಿಮ್ಮ ಸಿಮ್ ಬೇರೆ ಫೋನ್‌ನಲ್ಲಿ ಕೆಲಸ ಮಾಡುವುದಿಲ್ಲ.
ಹೊಸ ಸ್ಮಾರ್ಟ್‌ಫೋನ್ ಬಳಸಲು ಆರಂಭಿಸುವ ಮುನ್ನವೇ ಈ ಸೆಟ್ಟಿಂಗ್‌ಗಳನ್ನು ಮಾಡಿಕೊಳ್ಳುವುದು ನಿಮ್ಮ ಡಿಜಿಟಲ್ ಸುರಕ್ಷತೆಗೆ ಅತ್ಯಗತ್ಯ. ಇದು ನಿಮ್ಮ ಫೋನ್ ಮರಳಿ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುವುದಲ್ಲದೆ, ಸೈಬರ್ ವಂಚನೆಯಿಂದ ನಿಮ್ಮನ್ನು ರಕ್ಷಿಸುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net