

Triple Talaq : ತನ್ನ ಬಾಸ್ ಜೊತೆಗೆ ಹಾಸಿಗೆ ಹಂಚಿಕೊಳ್ಳಲು ನಿರಾಕರಿಸಿದ ಎರಡನೇ ಪತ್ನಿಗೆ ಟೆಕ್ಕಿಯೊಬ್ಬ ತ್ರಿವಳಿ ತಲಾಖ್ ಘೋಷಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಕಲ್ಯಾಣ್ನಲ್ಲಿ ನಡೆದಿದೆ.
ಡಿಸೆಂಬರ್ 19ರಂದು ಈ ಘಟನೆ ನಡೆದಿದೆ. ಪಾರ್ಟಿಯೊಂದರಲ್ಲಿ 45 ವರ್ಷದ ಟೆಕ್ಕಿಯೊಬ್ಬ ತನ್ನ ಬಾಸ್ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ 28 ವರ್ಷದ ಪತ್ನಿಗೆ ಕೇಳಿದ್ದ. ಆಕೆ ನಿರಾಕರಿಸಿದಾಗ ತವರು ಮನೆಯಿಂದ 15 ಲಕ್ಷ ರೂ. ತೆಗೆದುಕೊಂಡು ಬರಲು ಬೇಡಿಕೆ ಇಟ್ಟಿದ್ದ. ಮೊದಲ ಪತ್ನಿಯಿಂದ ಬೇರೆಯಾಗಿದ್ದು, ಆಕೆಗೆ 15 ಲಕ್ಷ ರೂ. ನೀಡಲು ಎರಡನೇ ಪತ್ನಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಅದನ್ನೂ ನಿರಾಕರಿಸಿದಾಗ ಸ್ಥಳದಲ್ಲೇ ತ್ರಿವಳಿ ತಲಾಖ್ ಹೇಳಿದ್ದಾನೆ. ಅಲ್ಲದೆ, ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾನೆ.
ಇದೇ ವರ್ಷ ಜನವರಿಯಲ್ಲಿ ಟೆಕ್ಕಿ ವಿವಾಹವಾಗಿದ್ದ. ಮೊದಲ ಕೆಲವು ತಿಂಗಳುಗಳ ಕಾಲ ಸಂಸಾರ ಚೆನ್ನಾಗಿಯೇ ಸಾಗಿತ್ತು. ಪರಸ್ಪರ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಟೆಕ್ಕಿ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದಾಗ ಸಮಸ್ಯೆಗಳು ಪ್ರಾರಂಭವಾದವು. ಮೊದಲ ಪತ್ನಿಯಿಂದ ಬೇರೆಯಾದ ಹಿನ್ನೆಲೆಯಲ್ಲಿ ಆಕೆಗೆ 15 ಲಕ್ಷ ರೂ. ನೀಡಬೇಕಿತ್ತು. ಅದನ್ನು ಎರಡನೇ ಪತ್ನಿಯಿಂದ ವಸೂಲಿ ಮಾಡಲು ಮುಂದಾಗಿದ್ದ. ಆದರೆ, ಅದಕ್ಕೆ ಎರಡನೇ ಪತ್ನಿ ಒಪ್ಪದಿದ್ದಾಗ ಕಾನೂನಿಗೆ ವಿರುದ್ಧವಾಗಿ ತ್ರಿವಳಿ ತಲಾಖ್ ಘೋಷಣೆ ಮಾಡಿದ್ದಾನೆ.
ತ್ರಿವಳಿ ತಲಾಖ್ ಘೋಷಣೆಯಾದ ನಂತರ ಮಹಿಳೆ ಸಂಭಾಜಿ ನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಂದಹಾಗೆ ಭಾರತದಲ್ಲಿ ತ್ರಿವಳಿ ತಲಾಖ್ 2019ರಿಂದ ಕ್ರಿಮಿನಲ್ ಅಪರಾಧವಾಗಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 115(2), 351(2), 351(3), 352 ಮತ್ತು ಮುಸ್ಲಿಂ ಮಹಿಳೆಯರ ಕಾಯ್ದೆ 2019 (ಮದುವೆ ಹಕ್ಕುಗಳ ರಕ್ಷಣೆ) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)