ನೀನು ಕಪ್ಪಗಿದ್ದೀಯ, ನನ್ನ ಮಗನಿಗೆ ಸರಿಯಾದ ಜೋಡಿಯಲ್ಲ... ಟೆಕ್ಕಿ ಸಾವು, ಸ್ಪೋಟಕ ಸಂಗತಿ ಬಯಲು! Dowry Death

Dowry Death
Published on

Dowry Death : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳಾ ಐಟಿ ಇಂಜಿನಿಯರ್ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೃತಳನ್ನು ಎಸ್.ಜೆ. ಪಾಳ್ಯದ ನಿವಾಸಿ ಶಿಲ್ಪಾ (26) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ ಪ್ರವೀಣ್ ಹೇಳಿದ್ದಾರೆ.

ನಗರದ ಸುದ್ದಗುಂಟ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಶಿಲ್ಪಾ ಅವರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆ ಎಂದು ಪತಿ ಪ್ರವೀಣ್​ ಹೇಳಿದರೆ, ಶಿಲ್ಪಾಳ ಕುಟುಂಬ ಇದು ಆತ್ಮಹತ್ಯೆಯಲ್ಲ, ವರದಕ್ಷಿಣೆಗಾಗಿ ಆಕೆಗೆ ಪದೇಪದೆ ಕಿರುಕುಳ ನೀಡಿ ಸಾವಿಗೆ ಪ್ರಚೋದನೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.

ಶಿಲ್ಪಾ ಅವರ ಪತಿ ಪ್ರವೀಣ್​ ಕೂಡ ಮಾಜಿ ಸಾಫ್ಟ್‌ವೇರ್ ಉದ್ಯೋಗಿ. ಸುಮಾರು ಎರಡೂವರೆ ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷ ಮತ್ತು ಆರು ತಿಂಗಳ ಮಗುವಿದೆ. ಶಿಲ್ಪಾ ಅವರು ತಮ್ಮ ಇಂಜಿನಿಯರಿಂಗ್ ಪದವಿ ಮುಗಿಸಿ, ಮದುವೆಯಾಗುವ ಮೊದಲೇ ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಕೂಡ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು ಮತ್ತು ಒರಾಕಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾದ ಒಂದು ವರ್ಷದ ನಂತರ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಆಹಾರ ವ್ಯವಹಾರವನ್ನು ಪ್ರಾರಂಭಿಸಿದರು.

ಶಿಲ್ಪಾ ಅವರ ಪಾಲಕರು ನೀಡಿರುವ ದೂರಿನ ಪ್ರಕಾರ, ಪ್ರವೀಣ್ ಅವರ ಕುಟುಂಬವು ಮದುವೆಯ ಸಮಯದಲ್ಲಿ 15 ಲಕ್ಷ ರೂಪಾಯಿ ನಗದು, 150 ಗ್ರಾಂ ಚಿನ್ನಾಭರಣ ಮತ್ತು ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡುವಂತೆ ಬೇಡಿಕೆ ಇಟ್ಟಿತ್ತು. ಅದರಂತೆ ಬೇಡಿಕೆಗಳನ್ನು ಶಿಲ್ಪಾ ಕುಟುಂಬ ಈಡೇರಿಸಿತ್ತು. ಆದರೆ, ಈ ಬೇಡಿಕೆ ಇಷ್ಟಕ್ಕೆ ನಿಲ್ಲಲಿಲ್ಲ, ಮದುವೆಯ ನಂತರವೂ ಹೆಚ್ಚುವರಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಶಿಲ್ಪಾ ಅವರ ಅತ್ತೆ ಮಾವಂದಿರು ಆಕೆಯ ಮೇಲೆ ಒತ್ತಡ ಹೇರಿದ್ದರು. ವರದಕ್ಷಿಣೆಗಾಗಿ ಪದೇಪದೆ ನಿಂದನೆ ಮತ್ತು ಮಾನಸಿಕ ಕಿರುಕುಳದಿಂದ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಇದಿಷ್ಟೇ ಅಲ್ಲದೇ ಚರ್ಮದ ಬಣ್ಣದ ಆಧಾರದ ಮೇಲೆ ಶಿಲ್ಪಾಳಿಗೆ ಕಿರುಕುಳ ಸಹ ನೀಡಲಾಗಿತ್ತು ಎಂದು ಕುಟುಂಬ ಆರೋಪ ಮಾಡಿದೆ. ನೀನು ಕಪ್ಪಗಿದ್ದೀಯ ಮತ್ತು ನನ್ನ ಮಗನಿಗೆ ಸರಿಯಾದ ಜೋಡಿಯಲ್ಲ. ಅವನನ್ನು ಬಿಟ್ಟುಬಿಡು, ನಾವು ಅವನಿಗೆ ಒಳ್ಳೆಯ ವಧುವನ್ನು ಹುಡುಕಿ ಮದುವೆ ಮಾಡುತ್ತೇವೆ ಎಂದು ಆಕೆಯ ಅತ್ತೆ ಮಾನಸಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ದೂರಿನಲ್ಲಿ ಶಿಲ್ಪಾ ಕುಟುಂಬ ಉಲ್ಲೇಖಿಸಿದೆ.

ಆರು ತಿಂಗಳ ಹಿಂದಷ್ಟೇ ಆರೋಪಿ ಪ್ರವೀಣ್ ಅವರ ಕುಟುಂಬ ಆತನ ವ್ಯವಹಾರಕ್ಕೆ ಸಹಾಯ ಮಾಡುವಂತೆ ಶಿಲ್ಪಾ ಕುಟುಂಬದ ಬಳಿ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿತ್ತು. ಅದರಂತೆ ಶಿಲ್ಪಾ ಅವರ ಕುಟುಂಬ ಆ ಹಣವನನ್ನು ಪಾವತಿ ಮಾಡಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.

ದೂರಿನ ಅನ್ವಯ ಸುದ್ದಗುಂಟೆಪಾಳ್ಯ ಪೊಲೀಸರು ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದು, ಪ್ರವೀಣ್​ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶಿಲ್ಪಾಳ ಶವವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಎಲ್ಲ ಆರೋಪಗಳನ್ನು ಸಂತ್ರಸ್ತೆಯ ಕುಟುಂಬವೇ ಮಾಡಿದೆ. ಶಿಷ್ಟಾಚಾರದ ಪ್ರಕಾರ ನಾವು ವರದಕ್ಷಿಣೆ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ. ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಆರೋಪಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net