

Daali Dhananjay: ನಟ ಡಾಲಿ ಧನಂಜಯ್ ಅಭಿನಯದ 'ಹಲಗಲಿ' ಸಿನಿಮಾದ ಫಸ್ಟ್ ಲುಕ್ ಟೀಸರ್ ಇಂದು (ಆ.15) ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ್ ಬೇಡರ ನಾಯಕನ ಪಾತ್ರದಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಹಲಗಲಿ ಬೇಡರ ಹೋರಾಟದ ಕತೆ ಬೆಳ್ಳಿ ತೆರೆಯ ಮೇಲೆ ಸಿನಿಮಾ ರೂಪದಲ್ಲಿ ತೆರೆಕಾಣಲಿದೆ. ಸಿನಿಮಾದ ಟೀಸರ್ನಲ್ಲಿ ವಿಶೇಷವಾದ ಲುಕ್ನಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.
ಬುಡಕಟ್ಟು ಸಮುದಾಯದವರು ತಮ್ಮ ಕೈಯಲ್ಲಿ ಆಯುಧಗಳಾದ ಭರ್ಜಿ, ಕೊಡಲಿ, ಮಚ್ಚು, ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಬ್ರಿಟೀಷರ ಆಡಳಿತ ಭವನದ ಕಡೆಗೆ ನುಗ್ಗುತ್ತಿರುವ ದೃಶ್ಯ ಟೀಸರ್ನಲ್ಲಿ ಕಂಡು ಬಂದಿದೆ. ದುಹಾರಾ ಮೂವೀಸ್ ಯೂಟ್ಯೂಬ್ ಚಾನೆಲ್ನಲ್ಲಿ ಹಲಗಲಿ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಇನ್ನೂ ಈ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಗೆರಿಲ್ಲಾ ವಾರ್ ಮಾಡಿದ ಹಲಗಲಿ ವೀರರ ಕುರಿತು ಈ ಚಿತ್ರದಲ್ಲಿ ಡಾಲಿ ಅವರು ಬೇಡರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸುಕೇಶ್ ನಾಯಕ್ ನಿರ್ದೇಶನದ ಈ ಚಿತ್ರವನ್ನು ಕಲ್ಯಾಣ್ ಚಕ್ರವರ್ತಿ ಡಿ ಅವರು 80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಇರಲಿದ್ದು, ಸಿನಿಮಾನಲ್ಲಿ ಡಾಲಿ ಜೊತೆಗೆ ಸಪ್ತಮಿ ಗೌಡ, ಬಿ ಸುರೇಶ್, ಶರತ್ ಲೋಹಿತಾಶ್ವ, ಬಿರಾದರ್, ವೀಣಾ ಸುಂದರ್ ಇನ್ನೂ ಕೆಲ ನಾಯಕರು ಬಣ್ಣ ಹಚ್ಚಿದ್ದಾರೆ. ಕನ್ನಡದ ಜತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಕಾಣಲಿದೆ.
(ಏಜೆನ್ಸೀಸ್)
1857ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದಾಗ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು, ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರಿಗೆ ಗೆರಿಲ್ಲಾ ವಾರ್ ಮೂಲಕ ಕಾಡಿದ ಹಲಗಲಿ ಬೇಡರ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.