

ನವದೆಹಲಿ: ಆರಂಭಿಕ ಜಾನ್ ಕ್ಯಾಂಪ್‌ಬೆಲ್ (115 ರನ್, 199 ಎಸೆತ, 12 ಬೌಂಡರಿ, 3 ಸಿಕ್ಸರ್) ಚೊಚ್ಚಲ ಶತಕ ಹಾಗೂ ಅನುಭವಿ ಶೈ ಹೋಪ್ (103 ರನ್, 214 ರನ್, 12 ಬೌಂಡರಿ, 2 ಸಿಕ್ಸರ್) ಎಂಟು ವರ್ಷಗಳ ನಂತರ ಸಿಡಿಸಿದ ಸೆಂಚುರಿ ನೆರವಿನಿಂದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಇನಿಂಗ್ಸ್ ಸೋಲಿನ ಮುಖಭಂಗದಿಂದ ಪಾರಾಗಿದೆ. ಮೊದಲ ಪಂದ್ಯದಲ್ಲಿ ಎರಡೂವರೆ ದಿನಗಳಲ್ಲೇ ಶರಣಾಗಿದ್ದ ರೋಸ್ಟನ್ ಚೇಸ್ ಬಳಗ ಈ ಬಾರಿ ಪಂದ್ಯವನ್ನು 5ನೇ ದಿನದವರೆಗೆ ವಿಸ್ತರಿಸಿರುವುದೇ ಸಾಧನೆ ಎನಿಸಿದೆ.
ಸರಣಿಯಲ್ಲಿ 2-0 ಕ್ಲೀನ್‌ಸ್ವೀಪ್ ಸಾಧಿಸಲು 121 ರನ್‌ಗಳ ಸಾಧಾರಣ ಗುರಿ ಪಡೆದುಕೊಂಡಿರುವ ಶುಭಮಾನ್ ಗಿಲ್ ಪಡೆ ಗೆಲುವಿನ ಸನಿಹದಲ್ಲಿದ್ದು, ಐದನೇ ಹಾಗೂ ಅಂತಿಮ ದಿನವಾದ ಮಂಗಳವಾರ ಜಯದ ಔಪಚಾರಿಕತೆ ಪೂರ್ಣಗೊಳಿಸಬೇಕಾಗಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 97 ರನ್ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ವಿಂಡೀಸ್, ಭೋಜನ ವಿರಾಮದ ಬಳಿಕ ಜಸ್‌ಪ್ರೀತ್ ಬುಮ್ರಾ (44ಕ್ಕೆ 3) ಹಾಗೂ ಕುಲದೀಪ್ ಯಾದವ್ (104ಕ್ಕೆ 3) ದಾಳಿಗೆ ನಲುಗಿ ಕುಸಿತ ಕಂಡಿತು. ಆದರೆ ಕೊನೇ ವಿಕೆಟ್‌ಗೆ ಜಸ್ಟೀನ್ ಗ್ರೀವ್ಸ್ (50*) ಹಾಗೂ ಜೇಡನ್ ಸೀಲ್ಸ್ (32) ಪ್ರತಿರೋಧದಿಂದ ವಿಂಡೀಸ್ ಅಂತಿಮವಾಗಿ 118.5 ಓವರ್‌ಗಳಲ್ಲಿ 390 ರನ್‌ಗಳಿಗೆ ಎರಡನೇ ಸರದಿಯಲ್ಲಿ ಆಲೌಟ್ ಆಯಿತು. ಗೆಲುವಿಗೆ 121 ರನ್ ಗುರಿ ಬೆನ್ನಟ್ಟಲು ಆರಂಭಿಸಿದ ಭಾರತ, ಮೊದಲ ಇನಿಂಗ್ಸ್ ಶತಕವೀರ ಯಶಸ್ವಿ ಜೈಸ್ವಾಲ್ (8) ವಿಕೆಟ್ ಬೇಗನೆ ಕಳೆದುಕೊಂಡಿತು. ನಂತರ ಕನ್ನಡಿಗ ಕೆಎಲ್ ರಾಹುಲ್ (25*) ಮತ್ತು ಸಾಯಿ ಸುದರ್ಶನ್ (30*) ಎಚ್ಚರಿಕೆಯ ಆಟವಾಡಿ ಮುರಿಯದ ಎರಡನೇ ವಿಕೆಟ್‌ಗೆ 99 ಎಸೆತಗಳಲ್ಲಿ 54 ರನ್ ಸೇರಿಸಿದರು. ದಿನದಂತ್ಯಕ್ಕೆ ಭಾರತ 18 ಓವರ್‌ಗಳಲ್ಲಿ 1 ವಿಕೆಟ್‌ಗೆ 63 ರನ್ ಕಲೆಹಾಕಿದೆ. ಅಂತಿಮ ದಿನ 58 ರನ್ ಅವಶ್ಯವಿದ್ದು, ಮೊದಲ ಅವಧಿಯಲ್ಲೇ ಭಾರತ ಗೆಲುವು ಒಲಿಸಿಕೊಳ್ಳುವ ನಿರೀಕ್ಷೆ ಹರಡಿದೆ.