

ರಾಮಕಿಶನ್ ಕೆ.ವಿ. ಬೆಂಗಳೂರು
ರಾಜಧಾನಿಯಲ್ಲಿ ಬಿಡಾಡಿ ದನಗಳ ಸಮಸ್ಯೆ ನಿಯಂತ್ರಿಸಲು ಬಿಬಿಎಂಪಿ ಪಶುಪಾಲನಾ ವಿಭಾಗ ವಿಶೇಷ ಯೋಜನೆ ರೂಪಿಸಿದೆ. ಇದಕ್ಕಾಗಿ ನಾಲ್ವರು ನುರಿತರ ತಂಡ ರಚಿಸಲು ಮುಂದಾಗಿದ್ದು, ಸದ್ಯದಲ್ಲೇ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸುತ್ತಿದೆ.
ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಹಸ್ತಾಂತರಿಸುವ ಕೆಲಸ ಶ್ರೀವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಹೋರಿಗಳ ಸಂಖ್ಯೆ ಹೆಚ್ಚಿದ್ದು, ಅವುಗಳನ್ನು ನಾಜೂಕಿನಿಂದ ಸೆರೆಹಿಡಿಯಲು ಕೌಶಲ ಹೊಂದಿದವರ ಅಗತ್ಯವಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅವು ಜನರ ಮೇಲೆರಗುವ ಅಪಾಯವಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೌಶಲವುಳ್ಳವರ ತಂಡ ರಚಿಸಲಾಗುತ್ತದೆ.
ಈ ನಾಲ್ಕು ಜನರ ವಿಶೇಷ ತಂಡಕ್ಕೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸದಸ್ಯರು ಸಾಥ್ ನೀಡಲಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ತಂಗಳು ಕಾರ್ಯಾಚರಣೆಗಿಳಿಯಲಿವೆ. ಗ್ರಾಮಾಂತರ ಭಾಗದಿಂದ ನಗರ ಪ್ರವೇಶಿಸುತ್ತಿರುವ ದನಗಳನ್ನು ನಿಯಂತ್ರಿಸಿದರೆ ಅರ್ಧದಷ್ಟು ಸಮಸ್ಯೆ ಬಗೆಹರಿಯುತ್ತದೆ. ಆಗಸ್ಟ್ ಅಂತ್ಯದೊಳಗೆ ಶೇ.80 ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ ಎಂದು ಬಿಬಿಎಪಿಂ ಪಶುಪಾಲನಾ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕನಕಪುರ ಭಾಗದಲ್ಲಿದ್ದ ಖಾಸಗಿ ಸಹಭಾಗಿತ್ವದ ಗೋಶಾಲೆಯೊಂದು ಇತ್ತೀಚೆಗೆ ಸ್ಥಗಿತಗೊಂಡ ಪರಿಣಾಮ, ನೂರಾರು ದನಗಳು ಅಲ್ಲಿಂದ ಹೊರಬಂದಿವೆ ಎನ್ನಲಾಗಿದೆ. ಅವುಗಳು ಆಹಾರ ಅರಸಿಕೊಂಡು ನಗರ ಪ್ರವೇಶಿಸಿವೆ. ಇನ್ನು ಬನ್ನೇರುಘಟ್ಟ, ಕೋರಮಂಗಲ, ಬಿಟಿಎಂ ಬಡಾವಣೆ, ಬೊಮ್ಮನಹಳ್ಳಿ, ಭಾಗದಲ್ಲಿ ಹೋರಿಗಳ ಗುಂಪು ಅಡ್ಡಾಡುತ್ತಿವೆ. ಇದರಿಂದ ವಾಹನಸವಾರರು, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪಾಲಿಕೆ ಬಳಿಯಿರುವ ಲಾರಿಯಲ್ಲಿ ಏಕಕಾಲಕ್ಕೆ 4&5 ಜಾನುವಾರುಗಳನ್ನು ಸಾಗಿಸಲು ಸಾಧ್ಯವಾಗುತ್ತಿದೆ. ಸೆರೆಹಿಡಿಯುವ ಕೆಲಸವನ್ನು ಇನ್ನಷ್ಟು ಸರಳೀಕರಿಸಲು ಪಶುಪಾಲನಾ ವಿಭಾಗ ಕ್ರೇನ್ ಮಾದರಿಯ ವಾಹನವೊಂದನ್ನು ಖರೀದಿಸಲು ಉತ್ಸುಕತೆ ತೋರಿದೆ.
ದನಗಳಿಗಿಂತಲೂ ಬಿಡಾಡಿ ಹೋರಿಗಳನ್ನು ಸೆರೆಹಿಡಿಯುವುದು ಅತ್ಯಂತ ಸವಾಲಿನ ಕೆಲಸ. ಕೆಲ ಸಂದರ್ಭದಲ್ಲಿ ಅವುಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಕಠಿಣ ಪರಿಸ್ಥಿತಿಯಲ್ಲಿ ಅರಿವಳಿಕೆ (ಅನಸ್ತೇಷಿಯಾ) ನೀಡಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಈ ವಿಚಾರವಾಗಿ ಹೆಬ್ಬಾಳದಲ್ಲಿರುವ ಪಶುವೈದ್ಯಕಿಯ ಕಾಲೇಜಿನ ತಜ್ಞರೊಂದಿಗೆ ಪಶುಪಾಲನಾ ವಿಭಾಗ ಚರ್ಚಿಸಿದೆ.
ಬಿಡಾಡಿ ದನಗಳ ಹಾವಳಿ ಸಂಚಾರ ಪೊಲೀಸರನ್ನೂ ಹೈರಾಣಾಗಿಸಿದೆ. ಜಾನುವಾರುಗಳ ಹಿಂಡು ರಸ್ತೆಮಧ್ಯೆಯೇ ಓಡಾಡುತ್ತಿದ್ದು, ವಾಹನ ಸವಾರರು ಎಷ್ಟೇ ಹಾರ್ನ್ ಹಾಕಿದರೂ ಪಕ್ಕ ಸರಿಯುತ್ತಿಲ್ಲ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರಿಗೆ ದನಗಳನ್ನು ಓಡಿಸುವುದೇ ಕೆಲಸವಾಗಿದೆ. ಹೀಗಾಗಿ ಬಿಡಾಡಿ ದನಗಳ ಸಮಸ್ಯೆ ಬಗೆಹರಿಸಲು ಸಂಚಾರ ಪೊಲೀಸರಿಂದಲೂ ಪಾಲಿಕೆಗೆ ಮನವಿ ವ್ಯಕ್ತವಾಗುತ್ತಿದೆ.