ವಿಜಯವಾಣಿ ಸುದ್ದಿಜಾಲ ಕೋಟ
ಶಿಕ್ಷಕರು ತನ್ನ ವೃತ್ತಿಯನ್ನು ಗೌರವಿಸುವುದರ ಜತೆಗೆ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಪ್ರೀತಿಸಿ ಪಾಠ ಪ್ರವಚನ ಮಾಡಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಹೇಳಿದರು.
ಕೋಟ ವಿದ್ಯಾ ಸಂಘ ಹಾಗೂ ವಿವೇಕ ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಪ್ರಯುಕ್ತ ನಡೆದ ನಿವೃತ್ತ ಅಧ್ಯಾಪಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಟ ವಿದ್ಯಾಸಂಘದ ಅಧ್ಯಕ್ಷ ಸಿಎಪಿ ಪ್ರಭಾಕರ ಮೈಯ ಅಧ್ಯಕ್ಷತೆ ವಹಿಸಿ, ಕೋಟ ವಿದ್ಯಾಸಂಘ ಒಂದು ವಿಶಿಷ್ಟ ಸಂಪ್ರದಾಯ ರೂಢಿಸಿಕೊಂಡಿದ್ದು, ಅಧ್ಯಾಪಕರ ನಡುವೆ ಉತ್ತಮ ಸಂಬಂಧ ಮತ್ತು ಅನ್ಯೋನ್ಯತೆ ಬೆಳಸುವಲ್ಲಿ ಸಹಕಾರಿ ಎಂದರು.
ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ್ ಶುಭಹಾರೈಸಿದರು. ಖಜಾಂಚಿ ವಲೇರಿಯನ್ ಮಿನೇಜಸ್ ಉಪಸ್ಥಿತರಿದ್ದರು. ಸಹನಾ ಪ್ರಾರ್ಥಿಸಿದರು. ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿದರು. ಜಗದೀಶ ಹೊಳ್ಳ ವಂದಿಸಿದರು. ಅಧ್ಯಾಪಕ ಪ್ರೇಮಾನಂದ ನಿರೂಪಿಸಿದರು.
ನಿವೃತ್ತ ಮುಖ್ಯ ಶಿಕ್ಷಕರಿಗೆ ಪುರಸ್ಕಾರ
ಇತ್ತೀಚೆಗೆ ನಿವೃತ್ತರಾದ ಮೂಡುಗಿಳಿಯಾರು ಸರ್ಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಶಿವರಾಂ ಭಟ್, ಮಣೂರು ಪಡುಕರೆ ನಿವೃತ್ತ ಮುಖ್ಯಶಿಕ್ಷಕ ಸೇಸು, ಮೂಡುಗಿಳಿಯಾರು ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ರಮೇಶ್, ಕಾರ್ಕಡ ಶಾಲಾ ಶಿಕ್ಷಕ ನಾರಾಯಣ ಆಚಾರ್ ಕಾರ್ಕಡ, ಕೋಟ ಶಾಂಭವಿ ಶಾಲಾ ಶಿಕ್ಷಕ ರಾಜಾರಾಂ ಕಾರಂತ್, ವಡ್ಡರ್ಸೆ ಸಹಿಪ್ರಾ ಶಾಲೆ ಶಿಕ್ಷಕಿ ಹೇಮಲತಾ ಅವರನ್ನು ಪುರಸ್ಕರಿಸಲಾಯಿತು.