

ಬೆಂಗಳೂರು : ಕರೊನಾ ವೈರಸ್ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಈ ತಿಂಗಳ ಅಂತ್ಯದವರೆಗೂ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ (ವರ್ಕ್ ಫ್ರಂ ಹೋಮ್) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿವಿಧ ಶೈಕ್ಷಣಿಕ ಚಟುವಟಿಕೆಗೆ ತಯಾರಿ ನಡೆಸುವ ಸಲುವಾಗಿ ಶಾಲೆಗೆ ಆಗಮಿಸಿ, ಕೆಲಸ ಮಾಡುವಂತೆ ಈ ಮೊದಲು ಸರ್ಕಾರ ಹೇಳಿತ್ತು. ಆದರೆ ಕರೊನಾ ಬಿಕ್ಕಟ್ಟು ಉಲ್ಬಣ ಆಗುತ್ತಿರುವ ಹಿನ್ನೆಲೆಯಲ್ಲಿ, ಮೊದಲಿನ ಆದೇಶವನ್ನು ಕೈಬಿಟ್ಟಿರುವ ಸರ್ಕಾರ, ಜುಲೈ 31ರವರೆಗೆ ವರ್ಕ್ ಫ್ರಂ ಹೋಮ್ ಮೂಲಕ ಕೆಲಸ ಮಾಡುವಂತೆ ಸೂಚಿಸಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್ ಸೋಮಶೇಖರ್, ಕೋವಿಡ್-19 ವೈರಸ್ ಸೋಂಕು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಸಾಗಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಿನಾಂಕ 31-07-2020ರವರೆಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿಯ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ ಎಂದಿದ್ದಾರೆ.
ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿ ಹಾಗೂ ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗೆ ಈ ಆದೇಶ ಅನ್ವಯ ಆಗುವುದಿಲ್ಲ. ಅವರನ್ನು ಹೊರತುಪಡಿಸಿ ಉಳಿದವರು ಮನೆಯಿಂದ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.
ಉಳಿದಂತೆ ಎಲ್ಲಾ ಶಾಲೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಸಂಶೋಧಕರು, ಗುತ್ತಿಗೆ, ಗೌರವ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ದಿನಾಂಕ 31-07-2020ರವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸಬೇಕು ಎಂದು ಅದರಲ್ಲಿ ಸೂಚಿಸಲಾಗಿದೆ. (ಏಜೆನ್ಸೀಸ್)