

ಭೋಪಾಲ್: ತೀವ್ರ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರು ಡಿಸೆಂಬರ್ 26ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಮೃತರ ಅಂತ್ಯಸಂಸ್ಕಾರವು ದೆಹಲಿಯ ನಿಗಮ್ ಬೋಧ್ ಘಾಟ್ನಲ್ಲಿ ಸಿಖ್ ಸಂಪ್ರದಾಯದಂತೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವಗಳೊಂದಿಗೆ ನೆರವೇರಿದ್ದು, ರಾಷ್ಟ್ರಾದ್ಯಂತ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ. ಇನ್ನೂ ಶೋಕಾಚರಣೆ ಚಾಲ್ತಿಯಲ್ಲಿರುವ ನಡುವೆಯೇ ಶಿಕ್ಷಕಿಯರು (Teachers) ವಿದ್ಯಾರ್ಥಿಗಳ ಜತೆ ಕುಣಿದು ಕುಪ್ಪಳಿಸಿರುವ ಘಟನೆ ನಡೆದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಸಾಮಾನ್ಯವಾಗಿ ಸರ್ಕಾರಗಳು ಶೋಕಾಚರಣೆ ಘೋಷಿಸಿದಾಗ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ. ಆದರೆ, ಮಧ್ಯಪ್ರದೇಶದ ಧಾರ್ ಜಿಲ್ಲೆಯ ಧಾರಾವರ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಶಿಕ್ಷಕಿಯರು (Teachers) ಶೋಕಾಚರಣೆ ಚಾಲ್ತಿಯಲ್ಲಿರುವ ಪರಿವಿಲ್ಲದೇ ವಿದ್ಯಾರ್ಥಿಗಳ ಜೊತೆ ಡ್ಯಾನ್ಸ್ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಶಿಕ್ಷಕಿಯರು (Teachers) ವಿದ್ಯಾರ್ಥಿನಿಯರ ಜೊತೆ ಜುಮರ್ ಸೇರಿದಂತೆ ಪ್ರಸಿದ್ಧ ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕಿದ್ದು, ಈ ಘಟನೆ ಮಾಜಿ ಪ್ರಧಾನಿಗಳಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ವಿಡಿಯೋಗೆ ಸಂಬಂಧಿಸಿದಂತೆ ಡ್ಯಾನ್ಸ್ ಮಾಡಿರುವ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ, ಪ್ರಭಾರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಅಭಿಷೇಕ್ ಚೌಧರಿ, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಶಿಕ್ಷಕಿಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅವರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ. ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.