ಉದಾತ್ತ ಚಿಂತನೆಯ ಶಿಕ್ಷಕರು ಅಪರೂಪ

HUN-JUNE-3-1(HONOUR TO LOKESH)
ಹುಣಸೂರು ನಗರದ ಗುರುಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಲೋಕೇಶ್ ಮತ್ತು ಅವರ ಪತ್ನಿಯನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಎಸ್.ಪಿ.ಮಹದೇವ್, ಮೋದೂರು ಮಹೇಶಾರಾಧ್ಯ ಇದ್ದರು.
Published on

ಹುಣಸೂರು: ಇಂದಿನ ಕಾಲಘಟ್ಟದಲ್ಲಿ ಉದಾತ್ತ ಚಿಂತನೆಯ ಶಿಕ್ಷಕರು ಅಪರೂಪವಾಗುತ್ತಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಮೋದೂರು ಮಹೇಶಾರಾಧ್ಯ ಬೇಸರ ವ್ಯಕ್ತಪಡಿಸಿದರು.

ಇತ್ತೀಚಿಗೆ ನಿವೃತ್ತರಾದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಸ್.ಲೋಕೇಶ್ ಅವರಿಗೆ ಸೋಮವಾರ ನಗರದ ಗುರುಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೇವೆ ಎನ್ನುವುದು ಮಾನವನ ಅಂತಃಕರಣದ ಪರಿಶುದ್ಧಿಗೆ ಪೂರಕವಾಗಿದ್ದು ಯಾರು ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ಮನಸ್ಸಿನಿಂದ ಸೇವೆಯನ್ನು ಸಮಾಜಮುಖಿಯಾಗಿ ಮಾಡುತ್ತಾರೋ ಅವರು ಸಹೃದಯರ ಎದೆಯಾಳದಲ್ಲಿ ಶಾಶ್ವತವಾಗಿ ನಿಲ್ಲುತ್ತಾರೆ. ಶಿಕ್ಷಕ ಅಕ್ಷರ ಕಲಿಸುವಾತ ಮಾತ್ರವಲ್ಲ. ಆತ ವಿದ್ಯಾರ್ಥಿಯ ಪಾಲಿನ ಭವಿಷ್ಯ, ವಿದ್ಯಾರ್ಥಿಯ ಪಾಲಿನ ದೇವರು, ವಿದ್ಯಾರ್ಥಿಯ ಮಾರ್ಗದರ್ಶಿ. ಶಿಕ್ಷಕನ ನಡವಳಿಕೆ, ಜೀವನಶೈಲಿ ಎಲ್ಲವೂ ವಿದ್ಯಾರ್ಥಿಯ ಮೇಲೆ ಗಾಢ ಪರಿಣಾಮ ಬೀರಬಲ್ಲದು ಎಂದರು.

ಉದಾತ್ತ ಚಿಂತನೆಗಳನ್ನು ಅನುಸರಿಸುವ ಶಿಕ್ಷಕರು ವಿದ್ಯಾರ್ಥಿಗಳನ್ನು ಹೆಚ್ಚು ಗಮನಿಸುತ್ತಾರೆ. ಆದರೆ ಇಂದು ಇಂಥ ಉದಾತ್ತ ಚಿಂತನೆಗಳೂ ಮಾಯವಾಗುತ್ತಿವೆ. ಚಿಂತನೆಯುಳ್ಳ ಶಿಕ್ಷಕರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಲೋಕೇಶ್ ಇದಕ್ಕೆ ಅಪವಾದ ಎನ್ನುವಂತೆ ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಶಿಕ್ಷಕರ ಸಮುದಾಯಕ್ಕೆ ಹೆಮ್ಮೆ ತರುವ ವ್ಯಕ್ತಿಯಾಗಿ ದುಡಿದಿದ್ದಾರೆ ಎಂದು ಶ್ಲಾಘಿಸಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿ, ಒಬ್ಬ ಉತ್ತಮ ಶಿಕ್ಷಕ ಸಾವಿರಾರು ಪ್ರಜ್ಞಾವಂತ ವಿದ್ಯಾರ್ಥಿಗಳನ್ನು ನಾಡಿಗೆ ಕಾಣಿಕೆಯಾಗಿ ನೀಡುತ್ತಾನೆ. ಅಂತಹ ಉತ್ಕೃಷ್ಟವಾದ ಗುಣಗಳು ಲೋಕೇಶ್ ಅವರಲಿದೆ ಎಂದರು.

ಕೊಡಗು ಜಿಲ್ಲೆ ಡಯೆಟ್‌ನ ಹಿರಿಯ ಉಪನ್ಯಾಸಕ ಬಿ.ಸಿ.ಚಿನ್ನೇಗೌಡ ಮಾತನಾಡಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಚ್.ಪಿ.ಹೇಮಲತಾ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಂ, ಜಗದೀಶ್, ಪಿರಿಯಾಪಟ್ಟಣ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುಸ್ವಾಮಿ, ಸೋಮಶೇಖರ್, ಮುಖ್ಯಶಿಕ್ಷಕರಾದ ಆರ್.ಕೃಷ್ಣ, ರುಕ್ಮಿಣಿ, ಕಾಲೇಜು ಪ್ರಾಂಶುಪಾಲ ಜನಾರ್ದನ್, ಉಪನ್ಯಾಸಕರಾದ ಡಾ.ಚಂದ್ರು, ಜಯರಾಂ. ಮಂಜುನಾಥ್, ಕರಿಮುನ್ನೀಸಾ, ಡಿಸೋಜ, ಪುಟ್ಟಣ್ಣಯ್ಯ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net