ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಅಗತ್ಯ : ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿಕೆ

New Project (43)
Published on

ಕಟೀಲು : ಕಳೆದ ಎರಡೂವರೆ ದಶಕಗಳಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ಸರ್ಕಾರ ನೇಮಿಸದೆ ಇರುವುದರಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸರ್ಕಾರದ ಇಲಾಖೆಗಳ ನಿಯಮಾವಳಿಗಳು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವಂತೆ ಮಾಡುತ್ತಿವೆ. ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.

ಕಟೀಲು ಶ್ರೀ ದುರ್ಗಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದ.ಕ. ಜಿಪಂ ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಉತ್ತರ ವಲಯ, ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನ ಕಾರ‌್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ನಿವೃತ್ತ ಉಪನ್ಯಾಸಕಿ, ಸಾಹಿತಿ ಭುವನೇಶ್ವರಿ ಹೆಗಡೆ ದಿಕ್ಸೂಚಿ ಭಾಷಣಗೈದರು. ಎಸ್ಸೆಸ್ಸೆಲ್ಸಿ ಸಾಧಕರನ್ನು, ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು, ನಿವೃತ್ತ ಶಿಕ್ಷಕರನ್ನು ಶಾಸಕ ಉಮಾನಾಥ ಕೋಟ್ಯಾನ್, ಶಾಸಕ ಭರತ್ ಶೆಟ್ಟಿ ಸನ್ಮಾನಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೋ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೇದಾವತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕೆ., ಡಯಟ್ ನೋಡಲ್ ಅಧಿಕಾರಿ ವಿಜಯಲಕ್ಷ್ಮೀ, ಶಿಕ್ಷಣಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅಜ್ಜಯ್ಯ ಎ.ಡಿ., ಪ್ರೌಢಶಾಲಾ ಸಹಶಿಕ್ಷಕರ ಸಂಘದ ವಾಸುದೇವ ರಾವ್, ದೈಹಿಕ ಶಿಕ್ಷಕರ ಸಂಘದ ನಿತಿನ್ ಪುತ್ರನ್, ಚೆಲುವಮ್ಮ, ಚಿತ್ರಕಲಾ ಶಿಕ್ಷಕರ ಸಂಘದ ರಾಜೇಶ್ವರಿ, ಲಕ್ಷ್ಮೀಶ ಕೆ., ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಲಕ್ಷ್ಮೀಶ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಂಬರೀಷ, ಸರ್ಕಾರಿ ನೌಕರರ ಸಂಘದ ಶರ್ಲಿ ಸುಮಾಲಿನಿ, ನಾಗರಾಜ ಎಂ., ಶಿಕ್ಷಣಾಧಿಕಾರಿಗಳ ಸಂಘದ ಉಸ್ಮನ್, ಕಟೀಲು ಪ್ರೌಢಶಾಲೆ ರಾಜಶೇಖರ ಎನ್., ಪ.ಪೂ.ಕಾಲೇಜಿನ ಕುಸುಮಾವತಿ ಮತ್ತಿತರರಿದ್ದರು.

ಬಲ್ಮಠ ಕಾಲೇಜಿನ ಕವಿತಾ, ಬಜಪೆ ಕಾಲೇಜಿನ ಅಶ್ವತ್ಥ್ ನಿಡ್ಡೋಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net