ಅಮೆರಿಕಾದಲ್ಲಿ ವಾಸವಿರುವ ಶಿಕ್ಷಕಿಗೆ ಗುಜರಾತ್‌ನಲ್ಲಿ ಸಂಬಳ!

school 1
Published on

ಗಾಂಧಿನಗರ: ದೇಶಕ್ಕೆ ಗುಜರಾತ್ ಮಾದರಿ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೆ ಗುಜರಾತಿನ ಸರ್ಕಾರಿ ಶಿಕ್ಷಕಿಯೊಬ್ಬರು ಅಮೆರಿಕದ ಚಿಕಾಗೋದಲ್ಲಿ ವಾಸವಿದ್ದು, ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ.

ಭಾವನಾಬೆನ್ ಪಟೇಲ್ ಎಂಬ ಶಿಕ್ಷಕಿ ಶಾಲೆಗೆ ಹೋಗದೆ ಎಂಟು ವರ್ಷದಿಂದ ಸಂಬಳ ಪಡೆಯುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.

ಭಾವನಾಬೆನ್ ಪಟೇಲ್ ಬನಸ್ಕಾಂತ ಜಿಲ್ಲೆಯ ಅಂಬಾಜಿ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು 2013 ರಲ್ಲಿ ಚಿಕಾಗೋಗೆ ತೆರಳಿದರು. ಆಕೆ ಗ್ರೀನ್ ಕಾರ್ಡ್ ಕೂಡ ಹೊಂದಿದ್ದಾರೆ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಗುಜರಾತ್ ಗೆ ಬರುತ್ತಾರೆ. ಇನ್ನು ವಿದ್ಯಾರ್ಥಿಗಳಿಗೆ ಆಕೆಯ ಪರಿಚಯವೇ ಇಲ್ಲ. ಆಕೆ ದೇಶದಲ್ಲಿ ಇಲ್ಲದಿದ್ದರೂ, ಕರ್ತವ್ಯಕ್ಕೆ ಹಾಜರಾಗದಿದ್ದರೂ, ಭಾವನಾ ಬೆನ್ ಅವರ ಹೆಸರು ರೋಸ್ಟರ್‌ನಲ್ಲಿ ಮುಂದುವರಿಯುತ್ತಿದೆ. ಪ್ರತಿ ತಿಂಗಳು ಆಕೆಯ ಬ್ಯಾಂಕ್ ಖಾತೆಗೆ ಸಂಬಳ ಜಮೆ ಮಾಡಲಾಗುತ್ತಿದೆ ಎಂದು ಇತರ ಶಿಕ್ಷಕರು, ಪಾಲಕರು ಆರೋಪಿಸುತ್ತಾರೆ.

ಈ ಬಗ್ಗೆ ಶಾಲೆಯ ಇತರೆ ಶಿಕ್ಷಕರು, ಪಾಲಕರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಾಥಮಿಕ ಶಿಕ್ಷಣಾಧಿಕಾರಿ ಪ್ರತಿಕ್ರಿಯಿಸಿದ್ದು, ಭಾವನಾಬೆನ್ ಪಟೇಲ್ 2023 ರ ಜನವರಿಯಲ್ಲಿ ಕೊನೆಯ ಬಾರಿಗೆ ಶಾಲೆಗೆ ಭೇಟಿ ನೀಡಿದ್ದರು. ಅವರು ಈ ವರ್ಷದಿಂದ ವೇತನರಹಿತ ರಜೆಯಲ್ಲಿದ್ದಾರೆ ಎಂದು ಅಧಿಕಾರಿ ಖಚಿತಪಡಿಸಿದ್ದಾರೆ. ಮತ್ತೊಂದೆಡೆ ಪಟೇಲ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net