RSS In Curriculum | ದೆಹಲಿ ಶಾಲಾ ಪಠ್ಯದಲ್ಲಿ ಆರ್‌ಎಸ್‌ಎಸ್‌ ಪಾಠ ; ಸುಳ್ಳು ಪ್ರಚಾರ ನಡೆಸುವ ಭಯವಿದೆ ಎಂದ ಆಪ್​ ನಾಯಕ ಭಾರದ್ವಾಜ್

Saurabh Bharadwaj
Published on

RSS In Curriculum: ದೆಹಲಿ ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾದ ಪಾಠ ಸೇರಿಸುವ ನಿರ್ಧಾರವನ್ನು ಆಮ್​ ಆದ್ಮಿ ನಾಯಕ ಮತ್ತು ಮಾಜಿ ಸಚಿವ ಸೌರಭ್ ಭಾರದ್ವಾಜ್ ಬುಧವಾರ (ಸೆ 1) ಟೀಕಿಸಿದ್ದಾರೆ.

ಈ ವಿಷಯವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಭಾರದ್ವಾಜ್​, ಈ ಕ್ರಮವು ಸಂಘದ ಬಗ್ಗೆ ಸುಳ್ಳುಗಳನ್ನು ಹರಡಬಹುದು, ಇತಿಹಾಸದ ಆಯ್ದ ಆವೃತ್ತಿಯನ್ನು ಪ್ರಸ್ತುತಪಡಿಸಬಹುದು, ಆರ್‌ಎಸ್‌ಎಸ್‌ನ ಹಿಂದಿನ ಕೆಲವು ಅಹಿತಕರ ಅಂಶಗಳನ್ನು ಕೈಬಿಡಬಹುದು ಮತ್ತು ತನ್ನ ಅನುಕೂಲಕ್ಕೆ ತಕ್ಕಂತೆ ಕೆಲ ಭಾಗಗಳನ್ನು ಮಾತ್ರ ಹೈಲೈಟ್ ಮಾಡಬಹುದು ಎಂದು ಹೇಳಿದ್ದಾರೆ.

ಆರ್​ಎಸ್​​ಎಸ್​​ ರಾಷ್ಟ್ರಧ್ವಜವನ್ನು ವಿರೋಧಿಸಿತ್ತಾ..?

ಆರ್‌ಎಸ್‌ಎಸ್ ಈ ಹಿಂದೆ ಭಾರತದ ರಾಷ್ಟ್ರಧ್ವಜವನ್ನು ವಿರೋಧಿಸಿತ್ತು ಮತ್ತು ಸುಮಾರು ಐವತ್ತು ವರ್ಷ ತಮ್ಮ ಪ್ರಧಾನ ಕಚೇರಿಯಲ್ಲಿ ಅದನ್ನು ಹಾರಿಸಲು ನಿರಾಕರಿಸಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರವಿದೆ ಎಂದು ಹೇಳಿಕೊಳ್ಳುವವರು, ನಿಜವಾಗಿ ಯಾವ ಪಾತ್ರ ವಹಿಸಿದೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಸಂಘದ ಹಿರಿಯ ನಾಯಕರು ಯಾವುದಾದರೂ ಚಳುವಳಿಯಲ್ಲಿ ಭಾಗಿಯಾಗಿದ್ದಾರೆಯೇ ಮತ್ತು ಯಾವುದು ಆ ಚಳುವಳಿ? ಎಂದು ಪ್ರಶ್ನಿಸಿದರು. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಕೂಡ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾದೊಂದಿಗೆ ಸಂಬಂಧ ಹೊಂದಿದ್ದರು. ಈ ಅಂಶಗಳು ಕೂಡ ಪಠ್ಯಕ್ರಮದಲ್ಲಿ ಸ್ಥಾನ ಪಡೆಯಬೇಕು. ಆರ್‌ಎಸ್‌ಎಸ್ ಅನ್ನು ವೈಭವೀಕರಿಸುವ ಆಯ್ದ ನಿರೂಪಣೆಯನ್ನು ಮಾತ್ರ ಪ್ರಚಾರ ಮಾಡಲಾಗುತ್ತದೆ ಎನ್ನವುದು ನಮಗೆ ಭಯ ತಂದಿದೆ ಎಂದರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಏಕೆ ಭಾಗವಹಿಸಲಿಲ್ಲ..?

1925 ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್, 1942 ರಲ್ಲಿ ಪ್ರಾರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಳ್ಳಲಿಲ್ಲ, ಬ್ರಿಟಿಷರು ಎರಡನೇ ಮಹಾಯುದ್ಧದಲ್ಲಿ ಹೋರಾಡುತ್ತಿದ್ದಾಗ ಮತ್ತು ಭಾರತದ ಮೇಲಿನ ಅವರ ಹಿಡಿತ ದುರ್ಬಲಗೊಂಡಿದ್ದ ಸಮಯದಲ್ಲಿ, ಆರ್‌ಎಸ್‌ಎಸ್ ವಸಾಹತುಶಾಹಿ ಆಡಳಿತವನ್ನು ವಿರೋಧಿಸುವ ಬದಲು ಹಿಂದೂಗಳನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಲು ಒತ್ತಾಯಿಸುತ್ತಿತ್ತು ಎಂದು ಆರೋಪಿಸಿದರು. ಕೆ.ಬಿ. ಹೆಡ್ಗೇವಾರ್ 1925 ರಲ್ಲಿ ಹಿಂದೂಗಳ ಕಲ್ಯಾಣಕ್ಕಾಗಿ ಆರ್‌ಎಸ್‌ಎಸ್ ಅನ್ನು ಸ್ಥಾಪಿಸಿದರು, ಆದರೆ, 1941 ರಲ್ಲಿ ಹಿಂದೂ ಮಹಾಸಭಾ ಮುಸ್ಲಿಂ ಲೀಗ್‌ನೊಂದಿಗೆ ಬಂಗಾಳದಲ್ಲಿ ಸರ್ಕಾರವನ್ನು ರಚಿಸಿತು ಎಂದು ಹೇಳಿದರು.

ಏನಿದು ವಿವಾದ.?

ದೆಹಲಿ ಸರ್ಕಾರ 'ರಾಷ್ಟ್ರನೀತಿ' ಎಂಬ ಶೈಕ್ಷಣಿಕ ಉಪಕ್ರಮದಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಆರ್‌ಎಸ್‌ಎಸ್ ಕುರಿತು ಹೊಸ ಅಧ್ಯಾಯವನ್ನು ಪರಿಚಯಿಸಲಾಗುವುದು ಎಂದು ಶಿಕ್ಷಣ ಸಚಿವ ಆಶಿಶ್ ಸೂದ್ ಘೋಷಿಸಿದ ನಂತರ ಈ ಹೇಳಿಕೆಗಳು ಬಂದಿವೆ. 1 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮವು ನಾಗರಿಕ ಅರಿವು, ನೈತಿಕ ಆಡಳಿತ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳಲ್ಲಿ ನಾಗರಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದು ಮತ್ತು ದೇಶದ ಮೂಲಭೂತ ಕರ್ತವ್ಯಗಳ ಬಗ್ಗೆ ಗಮನ ಸೆಳೆಯುವುದು ಆರ್‌ಎಸ್‌ಎಸ್ ಅಧ್ಯಾಯದ ಉದ್ದೇಶ ಎಂದು ಸೂದ್ ಹೇಳಿದರು. ಪಠ್ಯಕ್ರಮವು ಆರ್‌ಎಸ್‌ಎಸ್‌ನ ಇತಿಹಾಸ ಮತ್ತು ಮೂಲಗಳು, ಅದರ ಮಾರ್ಗದರ್ಶಿ ತತ್ವಗಳು ಮತ್ತು ಕೇದಾರನಾಥ ಮತ್ತು ಬಿಹಾರ ಪ್ರವಾಹದ ಸಮಯದಲ್ಲಿ ರಕ್ತದಾನ ಅಭಿಯಾನಗಳು, ಆಹಾರ ವಿತರಣೆ ಮತ್ತು ಪರಿಹಾರ ಕ್ರಮಗಳಂತಹ ಅದರ ಸಾಮಾಜಿಕ ಕಾರ್ಯಗಳನ್ನು ಹಾಗೂ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಒಳಗೊಂಡಿದೆ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆಯ ಪಾತ್ರವನ್ನು ಎತ್ತಿ ತೋರಿಸುತ್ತದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net