ಮಕ್ಕಳಿಗೆ ಸಂಸ್ಕೃತ ಕಲಿಸಿ, ಸಂಸ್ಕಾರ ಬೆಳೆಸಿ

sanskrit dinacharne
ಕೋಟೆಕಲ್ಲ ಗ್ರಾಮದ ಹಮ್ಮಿಕೊಂಡಿದ್ದ ವಿಶ್ವ ಸಂಸ್ಕೃತ ದಿನೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಿವೃತ್ತ ಬ್ರಿಗೇಡಿಯರ್ ಎಂ.ಎನ್. ಕಡಪಟ್ಟಿ, ಮುಖ್ಯಶಿಕ್ಷಕ ಪಿ.ಸಿ. ಬೆಟಗೇರಿ, ಮುಖ್ಯಶಿಕ್ಷಕಿ ಸುನಂದಾ ರಾಸನಕರ ಇತರರಿದ್ದರು.
Published on

ಗುಳೇದಗುಡ್ಡ: ಸಂಸ್ಕೃತ ಕಲಿಕೆಯಿಂದ ಮಕ್ಕಳಲ್ಲಿ ಭಾಷಾ ಉಚ್ಚಾರ, ಕೌಶಲ, ಸಂಸ್ಕಾರ, ಸಂಸ್ಕೃತಿ ಬೆಳೆಯಲು ಸಾಧ್ಯ ಎಂದು ನಿವೃತ್ತ ಬ್ರಿಗೇಡಿಯರ್ ಎಂ.ಎನ್. ಕಡಪಟ್ಟಿ ಹೇಳಿದರು.
ಸಮೀಪದ ಕೋಟೆಕಲ್ಲದ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ವತಿಯಿಂದ ಕೋಟೆಕಲ್ ಸರ್ಕಾರಿ ಆರ್‌ಎಂಎಸ್‌ಸಿ ಪ್ರೌಢಶಾಲೆ ಹಾಗೂ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಂಸ್ಕೃತ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ ಹೀಗೆ ಆದಿಕಾಲದ ಎಲ್ಲ ಗ್ರಂಥ, ಪುರಾಣಗಳು ಸಂಸ್ಕೃತ ಭಾಷೆಯಲ್ಲಿವೆ. ಭಾರತೀಯ ಸಂಸ್ಕೃತಿಯ ಗತವೈಭವ ಹಾಗೂ ಹಿಂದಿನ ಐತಿಹಾಸಿಕ ಹಿನ್ನೆಲೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಸ್ಕೃತ ಭಾಷೆ ಬಹಳಷ್ಟು ನೆರವಾಗಲಿದೆ. ಸಂಸ್ಕೃತ ನಮ್ಮ ಆಡು ಭಾಷೆಯಾಗಿ ಬೆಳೆಯುವ ನಿಟ್ಟಿನಲ್ಲಿ ಸಂಸ್ಕೃತ ಭಾಷೆಯನ್ನು ಪ್ರತಿಯೊಬ್ಬರೂ ಕಲಿಯಬೇಕೆಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತ ಕಲಿಕೆಯಿಂದ ಉತ್ತಮ ಸಂಸ್ಕಾರ ಬೆಳೆಯುತ್ತದೆ. ದೇವ ಭಾಷೆಯಾಗಿ ಬೆಳೆದು ಬಂದ ಸಂಸ್ಕೃತ ಈಗ ದೇಶ ವಿದೇಶಗಳಲ್ಲೂ ಬೆಳಗುತ್ತಿದೆ. ಸಂಸ್ಕೃತ ಭಾಷೆಗೆ ಈಗ ತನ್ನದೇ ಆದ ಮಹತ್ವವಿದೆ ಎಂದರು.
ಕೋಟೆಕಲ್ ಸರ್ಕಾರಿ ಆರ್‌ಎಂಎಸ್‌ಸಿ ಪ್ರೌಢಶಾಲೆ ಮುಖ್ಯಶಿಕ್ಷಕ ಪಿ.ಸಿ. ಬೆಟಗೇರಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವಿಶ್ವ ಸಂಸ್ಕೃತ ದಿನೋತ್ಸವದಲ್ಲಿ ಮಕ್ಕಳಿಂದ ಹಲವು ಬಗೆಯ ಸಂಸ್ಕೃತದಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆದು ನೋಡುಗರ ಗಮನ ಸೆಳೆದವು.
ಶಾರದಾ ಸಂಸ್ಕೃತ ಪಾಠ ಶಾಲೆ ಮುಖ್ಯಶಿಕ್ಷಕಿ ಸುನಂದಾ ರಾಸನಕರ, ಎಂ.ಎಸ್. ಸೊರಟುರ್, ರುದ್ರಪ್ಪ ಲಮಾಣಿ, ಎಸ್.ವಿ. ಸಾಲಿಮಠ, ಎಂ.ಎಸ್. ತಾಂಡೂರ, ಎನ್.ಟಿ. ನಿಡಗುಂದಿ, ಪಿ.ಎನ್. ಗಾಳಿ, ಎಸ್.ಎಸ್. ಕವಡಿಮಟ್ಟಿ, ಮಂಜುಳಾ ಹೂಲಿ, ಎ.ಜಿ. ಬಳಿಗೇರಿ, ಎಸ್.ಎನ್. ಗುಡ್ಡದ, ಪಾರ್ವತಿ, ಬಿ.ಆರ್. ಲಮಾಣಿ, ಮೋಹನ ರಾಸನಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net