ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ತೆರಿಗೆ ವಿಷಯವೇ ಮೂಲ; ದಕ್ಷಿಣ V/S ಉತ್ತರ ಕೃತಿ ಬಿಡುಗಡೆಗೊಳಿಸಿದ ಕೃಷ್ಣಬೈರೇಗೌಡ

Tax
Published on

ಬೆಂಗಳೂರು: ರಾಜಪ್ರಭುತ್ವದ ಕಾಲದಲ್ಲಿ ಆಗುತ್ತಿದ್ದ ತಾರತಮ್ಯದ ವಿರುದ್ಧದ ಹೋರಾಟಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುತಳೆದಿದ್ದು, ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳ ಅಸ್ತಿತ್ವಕ್ಕೆ ತೆರಿಗೆ ವಿಷಯವೇ ಮೂಲವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾನ್ಕೇವ್ ಪ್ರಕಾಶನ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ‘ದಕ್ಷಿಣ V/S ಉತ್ತರ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಸರ್ಕಾರ ಎಂದರೆ ಎಕ್ಸಿಕ್ಯುಷನ್ ಏಜೆನ್ಸಿಯಂತೆ ವರ್ತಿಸುವುದಲ್ಲ; ಬದಲಿಗೆ ತೆರಿಗೆಯನ್ನು ಸೃಜಿಸುವ, ಆದಾಯ ಮೂಲವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಆದರೆ ದಕ್ಷಿಣ ಭಾರತದ ರಾಜ್ಯಗಳು ಕಟ್ಟುವ ತೆರಿಗೆಯ ಹಣದಲ್ಲಿ, ಕೇಂದ್ರ ಸರ್ಕಾರ ಉತ್ತರ ಭಾರತದ ರಾಜ್ಯಗಳಿಗೆ ಬಹುಪಾಲು ಹಣವನ್ನು ಹಂಚುತ್ತಿದೆ. ಈ ಬಗ್ಗೆ ಕೇಂದ್ರದ ಮುಂದೆ ಎಲ್ಲ ಅಂಕಿ ಅಂಶಗಳನ್ನಿರಿಸಿ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ.

ದೇಶದಲ್ಲಿ ಆರೋಗ್ಯ, ಶಿಕ್ಷಣ, ಆಹಾರ ಇತ್ಯಾದಿ ಎಲ್ಲ ರೀತಿಯ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಕೇಂದ್ರ ತೆರಿಗೆ ಹಂಚಿಕೆ ವಿಷಯದಲ್ಲಿ ಅನ್ಯಾಯವೆಸಗುತ್ತಿದ್ದು, ಈ ಬಗ್ಗೆ ಸಚಿವ ಸಂಪುಟದ ಎಲ್ಲ ಸದಸ್ಯರು, ದಿಲ್ಲಿಯಲ್ಲಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಪ್ರತಿಭಟನೆಯನ್ನು ಮಾಡಿದ್ದೆವು. ಆದರೆ ಆ ಹೋರಾಟಕ್ಕೆ ರಾಷ್ಟ್ರವಿರೋಧಿ ಎಂಬ ಆರೋಪ ಮಾಡಲಾಯಿತು ಎಂದು ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಚಿತ್ರಸಾಹಿತಿ ಕವಿರಾಜ್, ಎಚ್.ಕೆ.ಬಿ.ಕೆ ಅಧ್ಯಕ್ಷ ಸಿ.ಎಂ.ಫೈಜ್ ಮತ್ತಿತರರು ಉಪಸ್ಥಿತರಿದ್ದರು.

ಆರ್.ಎಸ್.ನೀಲಕಂಠನ್ ಇಂಗ್ಲಿಷ್‌ನಲ್ಲಿ ಬರೆದಿರುವ ಸೌತ್ v/s ನಾರ್ಥ್ ಎಂಬ ಕೃತಿಯನ್ನು ಕೆ.ಪಿ.ಸುರೇಶ ಕನ್ನಡಕ್ಕೆ ‘ದಕ್ಷಿಣ V/S ಉತ್ತರ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.

1970 ತೆರಿಗೆ ಹಂಚಿಕೆ ಬಗ್ಗೆ ಆಕ್ಷೇಪಗಳಿವೆ. ಹೆಚ್ಚಿನ ಹಣ ಪಡೆದರೂ ಉತ್ತರದ ರಾಜ್ಯಗಳ ಅಭಿವೃದ್ಧಿಯ ಅಂತರ ಕಡಿಮೆ ಆಗಿಲ್ಲ. ನಮ್ಮ ಹಣದಲ್ಲಿ ಆಸ್ಪತ್ರೆ, ಶಾಲೆಗಳನ್ನು ಕಟ್ಟುವ ಬದಲು ಲಕ್ಷ ದೀಪೋತ್ಸವ ಮಾಡುತ್ತಿದ್ದಾರೆ.

"ಜನಸಂಖ್ಯೆ ನಿಯಂತ್ರಣದ ವಿಷಯದಲ್ಲಿ ದಕ್ಷಿಣದ ರಾಜ್ಯಗಳು ಯಶಸ್ವಿಯಾಗಿವೆ. ಆದರೆ ಉತ್ತರದಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆದಿದೆ. ಇದೇ ಕಾರಣವನ್ನಿಟ್ಟುಕೊಂಡು ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಸಂಸದ ಸ್ಥಾನಗಳನ್ನು ಹೆಚ್ಚಿಸುವ ಚಿಂತನೆಯಿದ್ದು, ಇದು ದಕ್ಷಿಣ ರಾಜ್ಯಗಳ ರಾಜಕೀಯ ಶಕ್ತಿ ಕುಂದಿಸುವ ಹುನ್ನಾರವಾಗಿದೆ."

-ಪ್ರಿಯಾಂಕ್ ಖರ್ಗೆ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net