ಹಳೆಯ ಗಾಡಿ ಕೊಟ್ಟರೆ ಹಣದ ಜತೆ ತೆರಿಗೆ ರಿಯಾಯಿತಿ: ಹೊಸ ವಾಹನ ಖರೀದಿಸದಿದ್ದರೆ ಪರಿಚಿತರಿಗೆ ಕೊಡಲು ಅವಕಾಶ

Scrap
Published on

ಬೆಂಗಳೂರು: ಹದಿನೈದು ವರ್ಷ ಪೂರೈಸುವ ಹಳೇ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವಂತೆ ಬಲವಂತ ಇಲ್ಲ. ಆದರೆ, ಮನೆಯಲ್ಲಿ ಬಳಕೆಯಾಗದೆ ಮೂಲೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ಸ್ಕ್ರ್ಯಾಪಿಂಗ್​ಗೆ ಹಾಕಿದರೆ ತೂಕದ ಲೆಕ್ಕದಲ್ಲಿ ಒಂದಷ್ಟು ಹಣ ಸಿಗುವ ಜತೆಗೆ ಹೊಸ ವಾಹನ ಖರೀದಿಯಲ್ಲಿ ಶೇ.25 ತೆರಿಗೆ ರಿಯಾಯಿತಿಯೂ ಸಿಗುತ್ತದೆ. ಒಂದು ವೇಳೆ, ಹಳೇ ವಾಹನದ ಮಾಲೀಕ ಹೊಸ ವಾಹನ ಖರೀದಿಸದಿದ್ದರೆ ತಮ್ಮಲ್ಲಿರುವ ರಿಯಾಯಿತಿ ಪತ್ರವನ್ನು ಸ್ನೇಹಿತರು, ಪರಿಚಿತರಿಗೆ ಕೊಟ್ಟು ಅವರು ಖರೀದಿಸುವ ವಾಹನದ ಮೇಲೆ ತೆರಿಗೆ ರಿಯಾಯಿತಿ ಪಡೆಯಲು ಸಾರಿಗೆ ಇಲಾಖೆ ಅವಕಾಶ ನೀಡಲು ತೀರ್ವನಿಸಿದೆ.

15 ವರ್ಷ ಪೂರೈಸಿರುವ ವಾಹನಗಳನ್ನು ಸ್ಕ್ರ್ಯಾಪ್​ ಮಾಡುವ ಪ್ರಕ್ರಿಯೆ ಏ.1ರಿಂದ ಕರ್ನಾಟಕದಲ್ಲಿ ಆರಂಭವಾಗುತ್ತಿದೆ. ಮೊದಲ ಹಂತದಲ್ಲಿ ಕಡ್ಡಾಯವಾಗಿ ಹಳೇ ವಾಹನ ಗುಜರಿಗೆ ಹಾಕುವ ನಿಯಮ ಜಾರಿಗೊಳಿಸುತ್ತಿಲ್ಲ. ಮಾಲೀಕ ಇಚ್ಛಿಸಿದರೆ ತನ್ನ ವಾಹನವನ್ನು ಗುಜರಿಗೆ ಹಾಕಬಹುದು. ಹಳೇ ವಾಹನಗಳ ಸ್ಕ್ರ್ಯಾಪಿಂಗ್​ ಘಟಕ ಸ್ಥಾಪನೆಗೆ ಬುಧವಾರದಿಂದ ಅರ್ಜಿ ಆಹ್ವಾನಿಸಲು ಸಾರಿಗೆ ಇಲಾಖೆ ತೀರ್ವನಿಸಿದೆ.

ಹಳೇ ವಾಹನಗಳನ್ನು ಗುಜರಿಗೆ ಹಾಕಿದರೆ ಅದರಲ್ಲಿರುವ ಸ್ಟೀಲ್​ಗೆ ತೂಕದ ಲೆಕ್ಕದಲ್ಲಿ ವಾಹನ ಮಾಲೀಕರಿಗೆ ಹಣ ನೀಡಲಾಗುತ್ತದೆ. ಜತೆಗೆ ಠೇವಣಿ ಪ್ರಮಾಣ ಪತ್ರವನ್ನು (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣ ಪತ್ರವನ್ನು ತೋರಿಸಿದರೆ ಹಳೇ ವಾಹನಕ್ಕೆ ಪಾವತಿಸಿರುವ ತೆರಿಗೆ ಆಧಾರದಲ್ಲಿ (1 ಲಕ್ಷ ತೆರಿಗೆ ಪಾವತಿಸಿದ್ದರೆ 25 ಸಾವಿರ ರೂ. ರಿಯಾಯಿತಿ) ಸಾರಿಗೇತರ ವಾಹನಕ್ಕೆ ಶೇ.25 ಹಾಗೂ ಸಾರಿಗೆ ವಾಹನಕ್ಕೆ ಶೇ.15 ತೆರಿಗೆ ವಿನಾಯಿತಿ ಸಿಗಲಿದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಹಾಗೂ ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ತೆರಿಗೆ ವಿನಾಯಿತಿ ಪಡೆಯಬಹುದಾಗಿರುತ್ತದೆ.

ಎಲೆಕ್ಟ್ರಿಕ್ ವಾಹನ ಖರೀದಿಗೆ ರಸ್ತೆ ತೆರಿಗೆ ವಿಧಿಸುವುದಿಲ್ಲ. ಅಂತಹ ಮಾಲೀಕರು, ತಮ್ಮಲ್ಲಿರುವ ಠೇವಣಿ ಪ್ರಮಾಣ ಪತ್ರವನ್ನು ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರಿಗೆ ಕೊಟ್ಟು ಅವರು ಹೊಸ ವಾಹನ ಖರೀದಿಸುವಾಗ ತೆರಿಗೆ ರಿಯಾಯಿತಿ ಪಡೆಯಲು ಅವಕಾಶ ನೀಡಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲಿಗೆ ಸ್ವಯಂಪ್ರೇರಿತರಾಗಿ ಮಾಲೀಕರೆ, ಹಳೇ ವಾಹನ ಗುಜರಿಗೆ ಹಾಕುವ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಆರ್​ಟಿಒ ಕಚೇರಿ ಅಥವಾ ಪೊಲೀಸ್ ಠಾಣೆಗೆ ತೆರಳದೆ ನೇರವಾಗಿ ಸ್ಕ್ರ್ಯಾಪಿಂಗ್​ ಕೇಂದ್ರದಲ್ಲೇ ಹಳೇ ವಾಹನ ಕೊಡಬಹುದು. ಸ್ಕ್ರ್ಯಾಪಿಂಗ್​ ಘಟಕಗಳ ಸ್ಥಾಪನೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ. | ಸಿ.ಮಲ್ಲಿಕಾರ್ಜುನ್ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ

ಕ್ರಿಮಿನಲ್ ಕೇಸ್ ಇರಬಾರದು: ಗುಜರಿಗೆ ಹಾಕಲು ವಾಹನಗಳನ್ನು ಕೊಡುವ ಮುನ್ನ ವಾಹನದ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಗೂ ದಂಡ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಲೀಕ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಸ್ಕ್ರಾ್ಯಪಿಂಗ್ ಕೇಂದ್ರದ ಮಾಲೀಕರು, ಗುಜರಿಗೆ ಹಾಕಿದ ವಾಹನ ಚಾಸ್ಸಿ ನಂಬರ್ ಅನ್ನು ಜೋಪಾನವಾಗಿ 6 ತಿಂಗಳು ಇಟ್ಟಿರಬೇಕು. ವಾಹನದ ಎಲ್ಲ ಭೌತಿಕ ದಾಖಲೆಗಳನ್ನು 2 ವರ್ಷದವರೆಗೆ ಹಾಗೂ ಸ್ಕಾ್ಯನ್ ದಾಖಲಾತಿಗಳನ್ನು 10 ವರ್ಷಗಳವರೆಗೆ ಸುರಕ್ಷಿತವಾಗಿ ಇಟ್ಟಿರಬೇಕು. ಅಧಿಕಾರಿಗಳು ಪರಿಶೀಲನೆಗೆ ಬಂದ ಸಂದರ್ಭದಲ್ಲಿ ದಾಖಲಾತಿ ತೋರಿಸಬೇಕಾಗುತ್ತದೆ ಎಂದು ಷರತ್ತುಗಳನ್ನು ವಿಧಿಸಲಾಗಿದೆ.

ಸ್ಕ್ರ್ಯಾಪಿಂಗ್​ ಕೇಂದ್ರ ಸ್ಥಾಪನೆಗೆ ಅರ್ಜಿ: ಕಾನೂನುಬದ್ಧವಾಗಿ ಸ್ಥಾಪನೆಯಾದ ವ್ಯಕ್ತಿ, ಸಂಸ್ಥೆ, ಸೊಸೈಟಿ, ಸ್ಕ್ರಾ್ಯಪಿಂಗ್ ಕೇಂದ್ರ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು. ವಾರ್ಷಿಕ 10 ಕೋಟಿ ವ್ಯವಹಾರ ನಡೆಸುವ ವ್ಯಕ್ತಿ/ಕಂಪನಿ ಅರ್ಜಿ ಆಹ್ವಾನಿಸಲಾಗುತ್ತದೆ. ಒಂದು ಘಟಕ ಸ್ಥಾಪನೆಗೆ ಕನಿಷ್ಠ 10 ಕೋಟಿ ರೂ. ಬೇಕಾಗುತ್ತದೆ. ಗುಜರಿ ವಾಹನಗಳ ಸ್ಕ್ರಾ್ಯಪಿಂಗ್ ನಿರ್ವಹಣೆಗೆ ವಿಶಾಲವಾದ ಸ್ಥಳಾವಕಾಶ ಬೇಕು. ಹೀಗಾಗಿ ಘಟಕಕ್ಕೆ ಕನಿಷ್ಟ 5 ಎಕರೆ ಜಾಗ ಬೇಕು. 1 ಲಕ್ಷ ರೂ. ಪ್ರೊಸೆಸಿಂಗ್ ಶುಲ್ಕ ಹಾಗೂ 10 ಲಕ್ಷ ರೂ. ಠೇವಣಿ ಇಡಬೇಕು. ಯಂತ್ರಗಳ ಖರೀದಿ, ಮಾನವ ಸಂಪನ್ಮೂಲ ಎಲ್ಲದಕ್ಕೂ ಹಣ ಖರ್ಚು ಮಾಡಬೇಕು. ಹೀಗಾಗಿ ಉತ್ತಮ ಸಂಸ್ಥೆಗಳು ಅರ್ಜಿ ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net