ತಾವರಗೇರಾ ವ್ಯಾಪ್ತಿ ಕುಡಿವ ನೀರಿನ ಕಾಮಗಾರಿ ಮಂದಗತಿ

19 TVG 4 Tank
ತಾವರಗೇರಾ ಸಮೀಪದ ಇದ್ಲಾಪುರ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಮೇಲ್ತೊಟ್ಟಿ ಕಾಮಗಾರಿ.
Published on

ವಿ.ಆರ್.ತಾಳಿಕೋಟಿ ತಾವರಗೇರಾ
ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯ ಆರು ಗ್ರಾಪಂಗಳಲ್ಲಿ ಸದ್ಯಕ್ಕೆ ಕುಡಿವ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ, ಆಲಮಟ್ಟಿ ಹಿನ್ನೀರು ಸಂಗ್ರಹಿಸಲು ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ಪೈಪ್‌ಲೈನ್ ಸಂಪರ್ಕ ಈವರೆಗೆ ಕೊಟ್ಟಿಲ್ಲ. ಗ್ರಾಮೀಣ ಭಾಗದಲ್ಲೂ ಅಪೂರ್ಣ ಕಾಮಗಾರಿ ಮಾಡಿ ಹಣ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ತಾವರಗೇರಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 18 ವಾರ್ಡ್‌ಗಳಿವೆ. ಬಳಕೆ ಹಾಗೂ ಕುಡಿವ ನೀರಿಗಾಗಿ ಒಟ್ಟು 43 ಕೊಳವೆಬಾವಿಗಳಿದ್ದು, ರಾಯನಕೆರೆ ತುಂಬಿದ್ದರಿಂದ ರೀಚಾರ್ಜ್ ಆಗಿದ್ದು ಎಲ್ಲವೂ ಸುಸ್ಥಿತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಡಿವ ನೀರು ಪೂರೈಕೆಗೆ ಹಳೆಯ ಮೂರು ಮೇಲ್ತೊಟ್ಟಿಗಳಿದ್ದು , ಈಗ ಮತ್ತೆ ಎರಡು ಟ್ಯಾಂಕ್ ನಿರ್ಮಿಸಲಾಗಿದೆ. ಇವುಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸುವ ಕಾಮಗಾರಿ ಕುಟುಂತ್ತಾ ಸಾಗಿದೆ.

ಆಲಮಟ್ಟಿ ಹಿನ್ನೀರು ಸಂಗ್ರಹಕ್ಕಾಗಿ ನಿರ್ಮಿಸಿರುವ ಮೇಲ್ತೊಟ್ಟಿ.
ಆಲಮಟ್ಟಿ ಹಿನ್ನೀರು ಸಂಗ್ರಹಕ್ಕಾಗಿ ನಿರ್ಮಿಸಿರುವ ಮೇಲ್ತೊಟ್ಟಿ.

ನಾಲ್ಕೈದು ವರ್ಷಗಳ ಹಿಂದೆ ಪಟ್ಟಣಕ್ಕೆ ಶಾಶ್ವತ ಕುಡಿವ ನೀರು ಪೂರೈಕೆಗಾಗಿ 90 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು, ನಡೆಯುತ್ತಿದೆ. ಪಟ್ಟಣದಿಂದ 18 ಕಿಮೀ ದೂರದ ತುರ್ವಿಹಾಳ ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಪೈಪ್‌ಲೈನ್ ಕೆಲಸ ಶೇ.90 ಮುಗಿದಿದೆ. ಅಲ್ಲದೆ ಪುರ ಕೆರೆ ನೀರು ಶುದ್ಧೀಕರಿಸುವ ಘಟಕ ನಿರ್ಮಿಸುವ ಕಾಮಗಾರಿಯೂ ಭರದಿಂದ ಸಾಗಿದೆ. ಅದಕ್ಕಾಗಿ ಹೆಚ್ಚುವರಿ 20 ಕೋಟಿ ರೂ. ಬಿಡುಗಡೆ ಮಾಡಿದ್ದು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣೆ ಹೊಣೆ ಹೊತ್ತಿದೆ. ಕಾಮಗಾರಿ ಮುಗಿಸಲು 2024ರ ಅಂತ್ಯದವರೆಗೆ ಅವಕಾಶ ನೀಡಲಾಗಿದೆ. ಆಲಮಟ್ಟಿ ಡ್ಯಾಮ್ ಹಿನ್ನೀರು ಸಂಗ್ರಹಿಸಿ ಪೂರೈಸಲು ಮೆಣೇಧಾಳ ರಸ್ತೆ ಪಕ್ಕ ಮಲ್ಲಯ್ಯನ ಗುಡಿ ಹತ್ತಿರ ಓವರ್‌ಹೆಡ್ ಟ್ಯಾಂಕ್ ಕಟ್ಟಿದ್ದು, ಪೈಪ್‌ಲೈನ್ ಕಾರ್ಯ ನಡೆದಿದೆ. ಇದು ಪೂರ್ಣಗೊಂಡರೆ ಹೋಬಳಿಯ ಆರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಆಗಲಿದೆ.

ಪುರ ಗ್ರಾಮದಲ್ಲಿ ಕುಡಿವ ನೀರು ಶುದ್ಧೀಕರಣ ಘಟಕ ಕಾಮಗಾರಿ ನಡೆದಿರುವುದು.
ಪುರ ಗ್ರಾಮದಲ್ಲಿ ಕುಡಿವ ನೀರು ಶುದ್ಧೀಕರಣ ಘಟಕ ಕಾಮಗಾರಿ ನಡೆದಿರುವುದು.

ಟ್ಯಾಂಕ್ ನಿರ್ಮಿಸಿದ್ದರೂ ತೊಟ್ಟು ನೀರಿಲ್ಲ
ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಟ್ಯಾಂಕ್ ನಿರ್ಮಾಣಕ್ಕೆಂದು ಪ್ರತಿ ಗ್ರಾಮಕ್ಕೆ 12-15 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ. ಕ್ರಿಯಾಯೋಜನೆ ಪ್ರಕಾರ ಒಂದು ಕೊಳವೆಬಾವಿ, ಅಲ್ಲಿಂದ ಮೇಲ್ತೊಟ್ಟಿಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್, ಮೋಟರ್‌ಗೆ ವಿದ್ಯುತ್ ಸಂಪರ್ಕ, ಗ್ರಾಮಕ್ಕೆ ಪೈಪ್‌ಲೈನ್, ಟ್ಯಾಂಕ್ ಸ್ವಚ್ಛತೆಗೆ ಅನುಕೂಲವಾಗಲು ಮೆಟ್ಟಿಲುಗಳು ನಿರ್ಮಿಸಬೇಕು. ಆದರೆ, ಕೆಲವೆಡೆ ನಿಯಮ ಉಲ್ಲಂಘಿಸಲಾಗಿದೆ. ಅಲ್ಲದೆ ಅರೆ-ಬರೆ ಕಾಮಗಾರಿ ಮಾಡಿ ಹಣ ಎತ್ತುವಳಿ ಮಾಡಲಾಗಿದೆ ಎಂಬ ಆರೋಪವಿದೆ. ವಿರುಪಾಪುರ ಗ್ರಾಮದ ಹೊರವಲಯದಲ್ಲಿ ಆರೇಳು ವರ್ಷಗಳ ಹಿಂದೆ ಅಂದಾಜು 8 ಲಕ್ಷ ರೂ. ವೆಚ್ಚದಲ್ಲಿ ಟ್ಯಾಂಕ್ ನಿರ್ಮಿಸಿದ್ದು, ಈವರೆಗೆ ನೀರು ಸಂಗ್ರಸಹಿಸಿಲ್ಲ. ಇದ್ಲಾಪುರ ಗ್ರಾಮದ ಹೊರವಲಯದಲ್ಲಿ ಜಿಪಂ 12 ಲಕ್ಷ ರೂ. ಅನುದಾನದಲ್ಲಿ ಎರಡು ವರ್ಷಗಳ ಹಿಂದೆ ಟ್ಯಾಂಕ್ ನಿರ್ಮಿಸಿದ್ದು, ಮೆಟ್ಟಿಲುಗಳನ್ನು ಕಟ್ಟಿಲ್ಲ. ಪೈಪ್‌ಲೈನ್, ವಿದ್ಯುತ್ ಸಂಪರ್ಕ ಕೊಟ್ಟಿಲ್ಲ.ಜೂಲಕುಂಟಿ ಗ್ರಾಮಕ್ಕೆ ಕುಡಿವ ನೀರು ಪೂರೈಸಲು ವರ್ಷದ ಹಿಂದೆ ನಿರ್ಮಿಸಿರುವ ಮೇಲ್ತೊಟ್ಟಿ ಇದ್ದೂ ಇಲ್ಲದಂತಾಗಿದೆ. ಮೆತ್ತಿನಾಳ ಹೊರವಲಯದಲ್ಲಿರುವ ಮೇಲ್ತೊಟ್ಟಿ ಸಹ ಮೇಲಿನ ಟ್ಯಾಂಕ್‌ಗಳಂತಿವೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.

ಕಿಲ್ಲಾರಹಟ್ಟಿ ತಾಂಡಾದಲ್ಲಿರುವ ಶುದ್ಧ ಕುಡಿಯುವ ನಿರಿನ ಘಟಕದ ಮುಂದೆ ಕುರಿಗಳು ನಿಂತಿರುವುದು.
ಕಿಲ್ಲಾರಹಟ್ಟಿ ತಾಂಡಾದಲ್ಲಿರುವ ಶುದ್ಧ ಕುಡಿಯುವ ನಿರಿನ ಘಟಕದ ಮುಂದೆ ಕುರಿಗಳು ನಿಂತಿರುವುದು.

ಬೆದರುಗೊಂಬೆಗಳಂತಾದ ಆರ್‌ಒ ಪ್ಲಾಂಟ್‌ಗಳು
ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಕೊರತೆಯಿಂದ ಜನರಿಗೆ ಅಶುದ್ಧ ನೀರೇ ಗತಿಯಾಗಿದೆ. ಲ್ಲಾರಹಟ್ಟಿ ಗ್ರಾಪಂ ಆವರಣದಲ್ಲಿ ಶುದ್ಧ ನೀರಿನ ಘಟಕ 8 ತಿಂಗಳಿನಿಂದ ಬಂದ್ ಆಗಿದೆ. ಕಿಲ್ಲಾರಹಟ್ಟಿ ತಾಂಡಾದಲ್ಲಿ ಆರ್‌ಒ ಪ್ಲಾಂಟ್ ಕಳೆದ 1 ವರ್ಷದಿಂದ ಸ್ಥಗಿತಗೊಂಡಿದ್ದು, ಘಟಕದ ಸುತ್ತಲು ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಅಲ್ಲದೆ ದನ, ಕರು, ಕುರಿ, ಆಡುಗಳು ವಿಶ್ರಾಂತಿ ಪಡೆಯುವ ತಾಣಗಳಾಗಿವೆ. ಇದ್ಲಾಪುರ ಗ್ರಾಮದಲ್ಲಿ ಎರಡು ವರ್ಷಗಳಿಂದ ಶುದ್ಧ ನೀರಿನ ಘಟ ನಿರ್ಮಾಣ ಮಾಡಿದ್ದು, ಆರಂಭದಿಂದ ಶುದ್ಧೀಕರಣ ಮಷಿನ್ ಸೇರಿದಂತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಚಾಲು ಆಗಿಲ್ಲ. ಕಳೆದ ಐದಾರು ತಿಂಗಳ ಹಿಂದೆ ಹೊಸದಾಗಿ ಘಟಕ ನಿರ್ಮಾಣ ಮಾಡಿದ್ದು, ಅದು ಸಹ ಕೆಟ್ಟು ಹೋಗಿ ಬೆದರುಗೊಂಬೆಗಳಂತಾಗಿದೆ.

ಇದ್ಲಾಪುರ ಗ್ರಾಮದಲ್ಲಿರುವ ಶುದ್ಧ ಕುಡಿವ ನಿರಿನ ಘಟಕ ಸ್ಥಗಿತಗೊಂಡಿರುವುದು.
ಇದ್ಲಾಪುರ ಗ್ರಾಮದಲ್ಲಿರುವ ಶುದ್ಧ ಕುಡಿವ ನಿರಿನ ಘಟಕ ಸ್ಥಗಿತಗೊಂಡಿರುವುದು.

ತಾವರಗೇರಾ ಪಟ್ಟಣದಲ್ಲಿ ಕಳೆದ ವರ್ಷ 12 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಆದರೆ ಈ ಸಲ ಪ್ರತಿದಿನ ಎರಡು ಸಲ ಕುಡಿವ ನೀರು ಪೂರೈಸಲಾಗುತ್ತಿದೆ. ರಾಯನಕೆರೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ನೀರು ಸಂಗ್ರಹವಾಗಿದ್ದರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ಸದ್ಯಕ್ಕೆ ನೀರಿನ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಜಲ ಸಮಸ್ಯೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.ನಬೀಸಾಬ್ ಖುದನವರ, ಮುಖ್ಯಾಧಿಕಾರಿ, ಪಪಂ, ತಾವರಗೇರಾ

ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಎಲ್ಲರ ಸತತ ಪ್ರಯತ್ನದ ಫಲದಿಂದ ಯೋಜನೆ ಸಾಕಾರಗೊಳ್ಳುತ್ತಿದೆ. ಪುರದ ಕೆರೆ ನೀರು ಶುದ್ಧೀಕರಣ ಘಟಕಕ್ಕಾಗಿ ಹೆಚ್ಚುವರಿ ಹಣ ಮಂಜೂರಾಗಿದೆ. ಮುಂದಿನ ವರ್ಷದೊಳಗೆ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಕೋರಲಾಗಿದೆ.ವಿಕ್ರಮ ರಾಯ್ಕರ, ಪಪಂ ಮಾಜಿ ಸದಸ್ಯ, ತಾವರಗೇರಾ

ಗ್ರಾಮದ ಜನರಿಗೆ ಕುಡಿವ ನೀರು ಪೂರೈಸಲು ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಕಾಮಗಾರಿ ಅಪೂರ್ಣವಾಗಿದೆ. ಅದಕ್ಕೆ ಕೊಳವೆ ಬಾವಿಯಿಂದ ನೀರು ಪೂರೈಕೆ, ಮೆಟ್ಟಿಲು, ಪೈಪ್‌ಲೈನ್, ವಿದ್ಯುತ್ ಸಂಪರ್ಕ ಕೊಟ್ಟಿಲ್ಲ.ಹನಮಗೌಡ ಪೊ.ಪಾಟೀಲ್, ಇದ್ಲಾಪುರ ಗ್ರಾಮಸ್ಥ

ತಾವರಗೇರಾ ಹೋಬಳಿಯಲ್ಲಿ ಕುಡಿವ ನೀರಿನ ಟ್ಯಾಂಕ್‌ಗಳು ಹೆಸರಿಗಷ್ಟೇ ನಿರ್ಮಿಸಲಾಗಿದೆ. ವರ್ಷಗಳೇ ಗತಿಸಿದರೂ ಈವರೆಗೆ ಪೈಪ್‌ಲೈನ್ ಸಮರ್ಪಕ ಕೊಟ್ಟಿಲ್ಲ, ಹನಿ ನೀರು ಸಂಗ್ರಹ ಮಾಡಿಲ್ಲ.ತಿಪ್ಪಣ್ಣ ಮಡ್ಡೇರ್, ಜುಮಲಾಪುರ ಗ್ರಾಮಸ್ಥ

ಒಂದು ವರ್ಷದಿಂದ ಶುದ್ಧ ಕುಡಿವ ನೀರಿನ ಘಟಕ ಸ್ಥಗಿತಗೊಂಡಿದ್ದು, ಕೊಳವೆಬಾವಿಯ ಫ್ಲೋರೈಡ್‌ಯುಕ್ತ ನೀರು ಕುಡಿಯಬೇಕಾಗಿದೆ. ಇಲ್ಲವೆ ಪಕ್ಕದ ಊರುಗಳಿಗೆ ಹೋಗಿ ಶುದ್ಧ ಕುಡಿವ ನೀರು ತಂದುಕೊಳ್ಳಬೇಕಾಗಿದೆ.ದುರಗೇಶ ಬೋಗಾಪುರ, ಇದ್ಲಾಪುರ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net