ಉಡುಪಿ: ಖ್ಯಾತ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಹಾಗೂ ಹವ್ಯಾಸಿ ಪತ್ರಕರ್ತ ತಾರಾನಾಥ ವರ್ಕಾಡಿಯವರು ಮಂಡಿಸಿದ ’ಕರಾವಳಿ ಕರ್ನಾಟಕದ ಯಕ್ಷಗಾನ ವೃತ್ತಿ ರಂಗಭೂಮಿಯ ಬಹುಮುಖಿ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಇದು ಯಕ್ಷಗಾನ ವೃತ್ತಿಪರ ಕಲಾವಿದರೋರ್ವರ ಸಾಧನೆ ಎಂಬುದು ಗಮನಾರ್ಹ.
ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಸುಮಾರು 4 ದಶಕಗಳ ತಿರುಗಾಟ ನಡೆಸಿದ ವರ್ಕಾಡಿಯವರು ಯಕ್ಷಗಾನ ವೇಷಧಾರಿ ಹಾಗೂ ತಾಳಮದ್ದಳೆ ಅರ್ಥದಾರಿಯಾಗಿ ಜನಮನ್ನಣೆ ಪಡೆದ ಕಲಾವಿದ. ಕನ್ನಡ ಹಾಗೂ ತುಳುವಿನಲ್ಲಿ ಅನೇಕ ಯಕ್ಷಗಾನ ಪ್ರಸಂಗ ರಚಿಸಿದ ಅವರು ಆಯುರ್ವೇದ, ಜ್ಯೋತಿಷ್ಯದಲ್ಲೂ ಪರಿಣತಿ ಹೊಂದಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದ ಅವರ ಬಹುಮುಖ ಚಟುವಟಿಕೆಗಳಿಗಾಗಿ ಅನೇಕ ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.