

ತಿರುವಳ್ಳೂರು: 6ನೇ ತರಗತಿಯ ವಿದ್ಯಾರ್ಥಿಯ ಪಾಲಕರು ಮತ್ತು ಸಂಬಂಧಿಕರು ಶಿಕ್ಷಕನನ್ನು ಚಪ್ಪಲಿಯಿಂದ ಥಳಿಸಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು; ಎಲ್ಲರೂ ನಿಮ್ಮ ಆರೋಗ್ಯದತ್ತ ಗಮನಹರಿಸಿ: ಡಿ.ಕೆ. ಶಿವಕುಮಾರ್
ಮೋಹನ್ ಬಾಬು ಎಂಬುವರೇ ಹಲ್ಲೆಗೊಳಗಾದ ಶಿಕ್ಷಕನಾಗಿದ್ದು, ಗುರುವರಾಜನ ಕಂಡಿಗೈ ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈತನ ವಿರುದ್ಧ ಹಲವಾರು ಆರೋಪಗಳು ಕೇಳಿ ಬಂದಿವೆ.
ಘಟನೆ ಹಿನ್ನೆಲೆ:
ಗುರುವರಾಜನ ಕಂಡಿಗೈ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಹರಿಹರನ್ ಸೋಮವಾರ ರಾತ್ರಿ 8 ಗಂಟೆಗೆ ಕೈಕಾಲು ಊದಿಕೊಂಡು ಮನೆಗೆ ಮರಳಿದ್ದು, ಮಂಗಳವಾರದಂದು ಬಾಲಕನ ಪಾಲಕರು ಮತ್ತು ಸಂಬಂಧಿಕರು ಶಾಲೆಗೆ ಆಗಮಿಸಿ ವಿದ್ಯಾರ್ಥಿಯ ಬಗ್ಗೆ ವಿಚಾರಿಸಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ವಿದ್ಯಾರ್ಥಿಯ ಸಂಬಂಧಿಕರು ಶಿಕ್ಷಕನನ್ನು ಸುತ್ತುವರೆದು ಅಮಾನುಷವಾಗಿ ಚಪ್ಪಲಿಯಿಂದ ಥಳಿಸಿದ್ದಾರೆ. ಮಗುವಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಬದಲು ಹಾಗೂ ಮನೆಗೆ ಹೋಗಲು ಬಿಡದೇ ಸಾಂಯಕಾಲದವರೆಗೆ ಆತನನ್ನು ಶಾಲೆಯ ಆವರಣದಲ್ಲಿ ಇರಿಸಲಾಗಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೆಲ ಅಧಿಕಾರಿಗಳು ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಧರ್ಮಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ: ಸಿದ್ದರಾಮಯ್ಯ
ಅಲ್ಲದೇ, ವಿದ್ಯಾರ್ಥಿಗೆ ಗಾಯದ ಕಾರಣವನ್ನು ಬಹಿರಂಗಪಡಿಸಬೇಡ. ಹಾಗೇನಾದರೂ ಮಾಡಿದರೆ ಶಾಲೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆಯನ್ನು ನೀಡಿ ಹಂಗಾಮಿ ಶಿಕ್ಷಕ ಮೋಹನ್ ಬಾಬು ಮಗುವಿನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ.
ಇನ್ನು ಘಟನೆಗೆ ಬಗ್ಗೆ ತಿಳಿಯುತ್ತಲೇ ಶಾಲೆಗೆ ಆಗಮಿಸಿದ ಪೊಲೀಸರು, ಶಾಲಾ ಶಿಕ್ಷಕನನ್ನು ರಕ್ಷಿಸಿ ಸುತ್ತಲೂ ನೆರೆದಿದ್ದ ಜನರನ್ನು ಚದುರಿಸಿದ್ದಾರೆ. ಘಟನೆ ಸಂಬಂಧ ತನಿಖೆ ಪ್ರಗತಿಯಲ್ಲಿದೆ.(ಏಜೆನ್ಸೀಸ್)