Tamil nadu : 'ರಾಜ್ಯಪಾಲ ರವಿ ಒಬ್ಬ ಆರ್ಯ': ಸಿಎಂ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ಕೌಂಟರ್

tn
Published on

ಚೆನ್ನೈ: ತಮಿಳುನಾಡಿ(Tamil nadu)ನಲ್ಲಿ ರಾಜ್ಯಪಾಲರು ಉಪಸ್ಥಿತರಿದ್ದ ಕಾರ್ಯಕ್ರಮವೊಂದರಲ್ಲಿ ಕಲಾವಿದರು ರಾಜ್ಯಗೀತೆಯ ವಾಕ್ಯ ಮರೆತು ಹಾಡಿದ್ದರಿಂದ ಎದ್ದ ರಾಜಕೀಯ ಬಿರುಗಾಳಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ರಾಜ್ಯಪಾಲ ಆರ್.ಎನ್.ರವಿ ಅವರನ್ನು ಗುರಿಯಾಗಿಸಿಕೊಂಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಗ್ಧಾಳಿ ನಡೆಸಿದ್ದು, ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಸಿಎಂ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಡಿಯಾ ಮೈತ್ರಿಕೂಟ ದೇಶದ ಏಕತೆಗೆ ಭಂಗ ತಂದಿದೆ ಎಂದು ಆರೋಪಿಸಿದ್ದಾರೆ.

"ಇಂಡಿಯಾ ಮೈತ್ರಿಕೂಟದಿಂದ ಅದರಲ್ಲೂ ಸ್ಟಾಲಿನ್ ಮತ್ತು ಆತನ ಪುತ್ರ ಉದಯನಿಧಿಯಿಂದ ದೇಶದ ಏಕತೆಗೆ ಭಂಗ ಉಂಟಾಗುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಆರ್ಯ ಮತ್ತು ದ್ರಾವಿಡ ಜನಾಂಗವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಈ ಜನರು ಕಳೆದ 50-60 ವರ್ಷಗಳಿಂದ ದೇಶವನ್ನು ಪ್ರದೇಶ, ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಏನಿದು ವಿವಾದ?:

ಹಿಂದಿ ಮಾಸದ ಪ್ರಯುಕ್ತ ದೂರದರ್ಶನ ಚೆನ್ನೈ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್.ರವಿ ಉಪಸ್ಥಿತರಿದ್ದರು. ಗಾಯಕರು ‘ತಮಿಳ್ ತಾಯ್ ವಲ್ತು’ ಹಾಡನ್ನು ಹಾಡಿದರು. ಆದರೆ ಈ ಸಮಯದಲ್ಲಿ ಗಾಯಕ 'ತೆಕ್ಕನ್ಮುಮ್ ಅದಿಲ್ ಸಿರಂತ ದ್ರಾವಿಡ ನಾಲ್ ತಿರು ನಾಡುಂ' ಎಂಬ ವಾಕ್ಯವನ್ನು ಮರೆತಿದ್ದಾರೆ. ಆದಾಗ್ಯೂ, ದೂರದರ್ಶನ ಚೆನ್ನೈ ನಂತರ ಈ ತಪ್ಪಿಗೆ ಕ್ಷಮೆಯಾಚಿಸಿತು.

ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇಡೀ ವಿಷಯದಲ್ಲಿ ರಾಜ್ಯಪಾಲರನ್ನು ಗುರಿಯಾಗಿಸಲು ಪ್ರಾರಂಭಿಸಿದ್ದು, ರವಿ ರಾಜ್ಯಪಾಲರೋ ಅಥವಾ ಆರ್ಯರೋ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ರಾಜ್ಯಪಾಲರನ್ನು ವಜಾಗೊಳಿಸುವಂತೆ ಕೇಂದ್ರವನ್ನು ಆಗ್ರಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net