

ಮುಂಬೈ: ಇದುವರೆಗೂ ವದಂತಿ ಅಂದುಕೊಂಡಿದ್ದ ಸುದ್ದಿಗೆ ನಟಿ ತಮನ್ನಾ ಅಧಿಕೃತ ಮುದ್ರೆ ಒತ್ತಿದ್ದಾರೆ. ತಾವು ನಟ ವಿಜಯ್ ವರ್ಮರನ್ನು ಪ್ರೀತಿಸುತ್ತಿರುವುದಾಗಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಲಸ್ಟ್ ಸ್ಟೋರಿಸ್ ವೆಬ್ ಸರಣಿ ಚಿತ್ರೀಕರಣ ಸಮಯದಲ್ಲಿ ಇಬ್ಬರು ಪರಿಚಿತರಾದರು ಎಂದು ತಿಳಿದುಬಂದಿದೆ. ಜೂನ್ 29ರಂದು ನೆಟ್ಫ್ಲಿಕ್ಸ್ನಲ್ಲಿ ಲಸ್ಟ್ ಸ್ಟೋರೀಸ್ ಬಿಡುಗಡೆಯಾಗಲಿದ್ದು, ಅದರ ಪ್ರಚಾರದಲ್ಲಿ ತಮನ್ನಾ ನಿರತರಾಗಿದ್ದಾರೆ.
ತಮನ್ನಾ ಹೆಸರಿನ ಜೊತೆ ಈ ಹಿಂದೆ ಹಲವರು ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಉದ್ಯಮಿ ಹೆಸರೂ ಇತ್ತು. ಆದರೆ, ಅಷ್ಟೊಂದು ಖ್ಯಾತರಲ್ಲದ ವಿಜಯ್ ವರ್ಮ ಪ್ರೀತಿಯಲ್ಲಿ ತಮನ್ನಾ ಬಿದ್ದಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ ತಮನ್ನಾ ಅವರು ವಿಜಯ್ ವರ್ಮಗಿಂತ ಆರು ಪಟ್ಟು ಅಧಿಕ ಆಸ್ತಿ ಹೊಂದಿದ್ದಾರೆ. ಇದು ತಮನ್ನಾ ಅವರ ಅಭಿಮಾನಿಗಳಿಗೆ ಮಾತ್ರವಲ್ಲ ಸಿನಿಮಾ ಇಂಡಸ್ಟ್ರಿಯವರಿಗೂ ಅಚ್ಚರಿ ಉಂಟು ಮಾಡಿದೆ.
37 ವರ್ಷದ ವಿಜಯ್ ವರ್ಮ ಹೈದರಾಬಾದ್ ಮೂಲದವರು. ಗಲ್ಲಿ ಬಾಯ್, ಪಿಂಕ್, ಭಾಗಿ 3 ಮತ್ತು ಡಾರ್ಲಿಂಗ್ಸ್ ಸೇರಿದಂತೆ ಅನೇಕ ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಆಸ್ತಿಯ ಮೌಲ್ಯ 17 ಕೋಟಿ ರೂ. ಎನ್ನಲಾಗಿದೆ.
ತಮನ್ನಾ ವಿಚಾರಕ್ಕೆ ಬರುವುದಾದರೆ, ಇಂದಿಗೂ ಸ್ಟಾರ್ ನಟಿಯರ ಸಾಲಿನಲ್ಲಿ ತಮನ್ನಾ ಗುರುತಿಸಿಕೊಂಡಿದ್ದಾರೆ. ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿರುವ ತಮನ್ನಾ, ಅವರ ಒಟ್ಟು ಆಸ್ತಿ 110 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ನಟಿಯರು ತನಗಿಂತಲೂ ಶ್ರೀಮಂತರಾದ ಉದ್ಯಮಿಯನ್ನು ಅಥವಾ ಸೂಪರ್ಸ್ಟಾರ್ ಅಥವಾ ಖ್ಯಾತ ಕ್ರಿಕೆಟಿಗನನ್ನು ವರಿಸುತ್ತಾರೆ. ಆದರೆ, ತಮನ್ನಾ ಈ ಪದ್ಧತಿಗೆ ಬೆಲೆ ಕೊಡದೆ ಆಸ್ತಿ ವಿಚಾರದಲ್ಲಿ ತನಗಿಂತಲೂ ತುಂಬಾ ಅಂತರದಲ್ಲಿರುವ ಮತ್ತು ಹೆಚ್ಚು ಖ್ಯಾತರಲ್ಲದ ನಟನನ್ನು ಪ್ರೀತಿಸುತ್ತಿದ್ದಾರೆ. ಹಣಕ್ಕಿಂತ ಗುಣಕ್ಕೆ ತಮನ್ನಾ ಪ್ರಾಮುಖ್ಯತೆ ಕೊಟ್ಟಿದ್ದಾರೆ ಅಂತಾ ಅವರ ಅಭಿಮಾನಿಗಳು ಅವರನ್ನು ಕೊಂಡಾಡುತ್ತಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಜೂನ್ 29ಕ್ಕೆ ಲಸ್ಟ್ ಸ್ಟೋರಿಸ್ ವೆಬ್ ಸರಣಿ ಬಿಡುಗಡೆಯಾಗಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಮತ್ತು ಸುಂದರ್ ಸಿ ನಿರ್ದೇಶನದ ಅರಮನೈ ಭಾಗ 4ರ ಚಿತ್ರದಲ್ಲಿ ತಮನ್ನಾ ನಟಿಸಿದ್ದಾರೆ. (ಏಜೆನ್ಸೀಸ್)