

ಮೈಸೂರು: ನಾಡಿನ ಸಂಸ್ಕೃತಿ, ಪರಂಪರೆಯೊಂದಿಗೆ ಬೆಳೆದು ಬಂದಿರುವ ಕನ್ನಡ ನಾಡಿನ ಅಸ್ಮಿತೆ ಮೈಸೂರು ಸ್ಯಾಂಡಲ್ ಸೋಪಿಗೆ ನಟಿಯೊಬ್ಬರನ್ನು ರಾಯಭಾರಿಯಾಗಿ ನೇಮಿಸಿರುವುದು ಸರ್ಕಾರದ ಅವಿವೇಕಿತನವಾಗಿದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕ ಕೆ.ವಿ.ಶ್ರೀಧರ್ ಟೀಕಿಸಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪು ಬೇರೆ ಸೋಪುಗಳಂತಲ್ಲ. ಆ ಸೋಪಿನಲ್ಲಿ ನಾಡಿನ ಪರಂಪರೆಯಿದೆ, ಸಂಸ್ಕೃತಿಯಿದೆ, ಪರಿಸರವಿದೆ, ಕನ್ನಡದ ಕಂಪಿದೆ, ಪರಿಮಳವಿದೆ. ಇಂತಹ ಹಿರಿಮೆಯುಳ್ಳ, ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ ಗತವೈಭವ ಹೊಂದಿರುವ ಶತಮಾನದ ಸೋಪನ್ನು ಬೇರೆ ಸೋಪುಗಳಂತೆ ಪರಿಗಣಿಸಿರುವುದೇ ಒಂದು ಅಪರಾಧ. ಅದರ ಜತೆಗೆ ನಟಿಯನ್ನು ರಾಯಭಾರಿಯಾಗಿ ನೇಮಿಸಿ 6.20 ಕೋಟ ರೂ. ಸಂಭಾವನೆ ನೀಡಿ ದುಂದು ವೆಚ್ಚಕ್ಕೆ ನಾಂದಿ ಹಾಡಿರುವುದು ಮಹಾಪರಾಧ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಷ್ಟಕ್ಕೂ ರಾಯಭಾರಿ ನೇಮಿಸಿರುವ ಸರ್ಕಾರದ ಉದ್ದೇಶವಾದರೂ ಏನು. ಮೈಸೂರು ಸ್ಯಾಂಡಲ್ ಸೋಪು ಬಳಸಿದರೆ ತಮನ್ನಾ ಅವರಂತಾಗುತ್ತಾರೇ ಎಂತಲೋ? ಇಲ್ಲ ಅವರಂತಹ ಮೈಬಣ್ಣ ಹೊಂದುತ್ತಾರೆ ಎಂತಲೋ? ಈ ಬಗ್ಗೆ ಸರ್ಕಾರ ಮೊದಲು ಸ್ಪಷ್ಟ್ಟಪಡಿಸಬೇಕು. ಮೈಸೂರು ಸ್ಯಾಂಡಲ್ ಸೋಪಿಗೆ ಸರಿಸಾಟಿಯಾದ ಸೋಪು ಬೇರೊಂದಿಲ್ಲ. ಅದು ಬೆಳೆದುಬಂದಿರುವ ಹಾದಿಯೇ ಬೇರೆ. ಖಾಸಗಿ ಕಂಪನಿಗಳ ಸೋಪುಗಳು ಜನ್ಮ ತಾಳಿದ ಉದ್ದೇಶವೇ ಬೇರೆ ಎಂಬುದನ್ನು ಸರ್ಕಾರ ಮೊದಲು ಅರಿಯಬೇಕು. ಖಾಲಿ ಇರುವ ಯಾರನ್ನಾದರೂ ರಾಯಭಾರಿಯಾಗಿ ನೇಮಿಸಲು ಅದೇನು ಸರ್ಕಾರದ ಗ್ಯಾರಂಟಿ ಯೋಜನೆಯೇ? ಸಿದ್ದರಾಮಯ್ಯ ಅವರು ಮೈಸೂರು ಸ್ಯಾಂಡಲ್ ಸೋಪಿನ ಇತಿಹಾಸ ಮರೆತಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿಯ ಅಗತ್ಯವಿದೆಯೇ? ರಾಯಭಾರಿ ಬೇಕು ಎಂಬುದೇ ಆದರೆ ಸೋಪಿಗಿರುವ ಪರಂಪರೆಯಷ್ಟೇ ಹಿನ್ನೆಲೆಯುಳ್ಳ ಯಾರನ್ನಾದರೂ ನೇಮಿಸಲಿ. ಅದಕ್ಕೆ ನಟಿಯರೇ ಏಕೆ ಬೇಕು. ಬೇರೆ ಕ್ಷೇತ್ರದ ಸಾಧಕರನ್ನು ನೇಮಿಸಿದರೆ ಆಗುವುದಿಲ್ಲವೇ?
ಪ್ರಚಾರವೇ ಮುಖ್ಯ ಉದ್ದೇಶವಾದರೆ ಪ್ರಸ್ತುತ ದೇಶದ ಪ್ರಧಾನಮಂತ್ರಿಗಳಿಗಿಂತ ಬೇರೊಬ್ಬ ಖ್ಯಾತನಾಮರು ಬೇಕೆ? ರಾಜಕೀಯವನ್ನು ಬದಿಗಿಟ್ಟು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರೇ ದೊಡ್ಡ ರಾಯಭಾರಿಯಾಗುತ್ತಾರೆ. ಅವರ ಕೈಯಲ್ಲೊಂದು ಸೋಪಿಟ್ಟು ಫೋಟೋ ತೆಗೆಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರೆ ಸಾಕಿತ್ತು. ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿತ್ತು. ಎಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಇಡೀ ದೇಶಕ್ಕೆ ರಾಗಿಮುದ್ದೆಯನ್ನು ಪ್ರಚಾರ ಮಾಡಿದ್ದರು. ಇಂದು ದೇಶದ ನಾನಾ ಹೋಟೆಲ್‌ಗಳಲ್ಲಿ ರಾಗಿಮುದ್ದೆ ದೊರೆಯುತ್ತಿದೆ ಎಂದರೆ ಅದಕ್ಕೆ ದೇವೇಗೌಡರೇ ಕಾರಣ.
ಈಗಲೂ ಕಾಲಮಿಂಚಿಲ್ಲ ರಾಯಭಾರಿಯನ್ನು ಸರ್ಕಾರ ಬದಲಾಯಿಸಲಿ. ಮುಂದಿನ ದಿನಗಳಲ್ಲಿ ಸೋಪಿನ ಪರಂಪರೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಅದನ್ನು ಬಿಟ್ಟು ಜನರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸರಿಯಲ್ಲ. ಪ್ರಚಾರ ತಂತ್ರ, ಮಾರುಕಟ್ಟೆ ವಿಸ್ತರಣೆ ಎಲ್ಲವೂ ಸರಿ. ಆದರೆ, ಸೋಪಿನ ಪರಂಪರೆಗೆ ಧಕ್ಕೆ ಬರದ ರೀತಿ ನೋಡಿಕೊಳ್ಳೂವುದು ಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.