ನವ ಬರಹಗಾರರಿಗೆ ಬೇಕಿದೆ ಪ್ರೋತ್ಸಾಹ...

KASAPA 1
Published on

ವಿಮರ್ಶಕ ಎಚ್​.ಆರ್​. ವಿಜಯಶಂಕರ ಆಶಯ

ಕಲಾಯತನ ಯಕ್ಷ-ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಈ ಹಿಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದ ಅಧ್ಯಾಪನ ಮತ್ತು ವಿವಿಯಲ್ಲಿರುವ ಪ್ರಾಧ್ಯಾಪಕರು, ಸಾಹಿತಿ ಮನೋಭಾವದ ಅಧಿಕಾರಿಗಳು, ವಿದ್ವಾಂಸರು ಈಗ ಕಂಡುಬರುತ್ತಿಲ್ಲ. ಕಾಲೇಜು ಸಾಹಿತ್ಯದ ಬರಹದಿಂದ ಸ್ವಾಧ್ಯಾಯನದ ಬರಹಗಾರರು ಹೆಚ್ಚುತ್ತಿದ್ದು, ಅವರನ್ನು ಪ್ರೋತ್ಸಾಹಿಸಲು ಕನ್ನಡ ಕಮ್ಮಟ, ಸಾಹಿತ್ಯ ಶಿಬಿರಗಳು ನಡೆಯುವಂತಾಗಬೇಕೆಂದು ವಿಮರ್ಶಕ ಎಸ್​.ಆರ್​. ವಿಜಯಶಂಕರ ಆಶಯ ವ್ಯಕ್ತಪಡಿಸಿದರು.

KASAPA 2
ಉಡುಪಿ ಕೊಡವೂರಿನ ಶಂಕರನಾರಾಯಣ ದೇಗುಲದ ವಸಂತ ಮಂಟಪದಲ್ಲಿ ಮೇ 17ರಂದು ಬೆಳಗ್ಗೆ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್​ನ ಉಡುಪಿ ಘಟಕದ 15ನೇ ಸಾಹಿತ್ಯ ಸಮ್ಮೇಳನ ಕಲಾಯತನ ಯಕ್ಷ-ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಸಾಪ ಉಡುಪಿ ಘಟಕದ ಮನೆಯೇ ಗ್ರಂಥಾಲಯ ಕಾರ್ಯಕ್ರಮವು ಮಾದರಿ ಹಾಗೂ ಆದರ್ಶದಾಯಕವಾಗಿದೆ. ರಾಜ್ಯಾದ್ಯಂತ ಪ್ರತಿ ಕನ್ನಡಿಗರ ಮನೆಯಲ್ಲೂ ಆರಂಭ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಕನ್ನಡವೂ ಬದುಕಿನ ಭಾಗ

KASAPA 3
ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ ಶಿಕ್ಷಣ, ಆಡಳಿತ ಹಾಗೂ ಮನೆಯಲ್ಲೂ ಕನ್ನಡವೇ ಉಸಿರಾಗಿದೆ. ಕನ್ನಡವೆಂದರೆ ಬದುಕಿನ ಭಾಗವಾಗಿದೆ. ಆದರೆ, ಇತ್ತೀಚಿಗೆ ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡಕ್ಕೆ ಕುತ್ತು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಜನರನ್ನು ಮಾತೃ ಭಾಷೆಯತ್ತ ಸೆಳೆಯುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನ ಪೂರಕವಾಗಿದೆ. ಎಲ್ಲವೂ ಕನ್ನಡದಲ್ಲೇ ಆಗಬೇಕೆಂಬ ಚಿಂತನೆಯ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಸಲು ಮುಂದಾಗಬೇಕು ಎಂದರು.

ನಾಲ್ಕು ಪುಸ್ತಕ ಬಿಡುಗಡೆ

KASAPA 4
ಸಾಹಿತಿ ಇಂದಿರಾ ಹಾಲಂಬಿ ಅವರ ಪಾವನ ಪಥಗಮ್ಯ, ಸುಚರಿತ ರಾಜೇಂದ್ರ ಅವರ ಲಾಸ್ಯವಾಡ ಬಾ, ಡಾ.ಗುರುಪ್ರಸಾದ ಭಟ್​ ಅವರ ಛತ್ರಪತಿ ಶಿವಾಜಿ, ಡಾ. ಹಯವದನ ಉಪಾಧ್ಯ ಮತ್ತು ಶಶಾಂಕ ಪಟೇಲ ಸಂಪಾದಕತ್ವದ ಕೆ.ಜಿ. ನಾರಾಯಣ ನೆನಪಿನ ಹೊತ್ತಿಗೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಸಾಪ ಗೌರವ ಸಮ್ಮಾನ

KASAPA 7
ದಲಿತ ಚಿಂತಕ ಜಯನ್​ ಮಲ್ಪೆ, ಸಿ.ಎಸ್​. ರಾವ್​, ವಿ.ಜಿ. ಶೆಟ್ಟಿ, ಭುವನ ಪ್ರಸಾದ ಹೆಗ್ಡೆ, ಹರಿಪ್ರಸಾದ ರೈ, ವಾದಿರಾಜ ಭಟ್​, ವೆಂಕಟೇಶ ಪೈ ಉಡುಪಿ, ವಿನಯ ಆಚಾರ್ಯ ಮುಂಡ್ಕೂರ್​ ಇವರಿಗೆ ಕಸಾಪ ಗೌರವ ಪುರಸ್ಕಾರ ನೀಡಲಾಯಿತು. ಪುರಸ್ಕೃತರನ್ನು ರಾಘವೇಂದ್ರ ಪ್ರಭು ಕರ್ವಾಲು ಪರಿಚಯಿಸಿದರು.
KASAPA 8
ಡಾ. ಹರಿಕೃಷ್ಣ ಪುನರೂರು, ಕೆ.ರಂಜನ್​, ಎಚ್​.ಡುಂಡಿರಾಜ,​ ಶಾಂತರಾಜ ಐತಾಳ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ.ಹರಿಶ್ಚಂದ್ರ, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ರಮೇಶ ಕಾಂಚನ್​, ಕೊಡವೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ ಕೊಡವೂರು, ವಿಶ್ವನಾಥ ಶೆಣೈ, ಸ್ವಾಗತ ಸಮಿತಿಯ ಅಧ್ಯಕ್ಷ ಸಾಧು ಸಾಲಿಯಾನ್​, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ ಉಪಸ್ಥಿತರಿದ್ದರು.
KASAPA 9
ಡಾ. ಗಣೇಶ ಗಂಗೊಳ್ಳಿ ಮತ್ತು ತಂಡದವರು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ ಕೊಡವೂರು ಸ್ವಾಗತಿಸಿದರು. ಕಸಾಪ ಉಡುಪಿ ಘಟಕದ ಅಧ್ಯಕ್ಷ ರವಿರಾಜ ಎಚ್​.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.

ಸಾಮರಸ್ಯಕ್ಕೆ ಧಕ್ಕೆಯಾಗದಿರಲಿ ಭಾಷಾಭಿಮಾನ

KASAPA 6
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ.ಎಲ್​. ಸಾಮಗ ಮಾತನಾಡಿ, ಸಾರ್ವಜನಿಕ ಸಾಮರಸ್ಯಕ್ಕೆ ನಮ್ಮ ಭಾಷಾಭಿಮಾನ, ಸಾಹಿತ್ಯಾಸಕ್ತಿ ಧಕ್ಕೆ ತರಬಾರದು. ಯಕ್ಷಗಾನ ಕಲಾವಿದನಾದ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಪರೋಕ್ಷವಾಗಿ ಯಕ್ಷಗಾನ ಸಾಹಿತ್ಯವನ್ನು ಸಾಹಿತ್ಯ ಪರಿಷತ್​ ಗೌರವಿಸಿದೆ ಎಂದು ಭಾವಿಸುತ್ತೇನೆ. ಆಧುನಿಕ ಯುಗದಲ್ಲಿ ವಿಸ್ಮಯಕಾರಿಯಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಜಾಗತಿಕ ಪ್ರಭಾವದಿಂದ ಕನ್ನಡ ಭಾಷೆಯ ಸ್ಥಿತಿಗತಿಯ ಆತಂಕ ಹೆಚ್ಚಿಸುತ್ತಿದೆ. ನಗರಗಳಲ್ಲಷ್ಟೇ ಅಲ್ಲದೆ, ಹಳ್ಳಿಗಳಲ್ಲೂ ಇಂಗ್ಲಿಷ್​ ಭಾಷೆಯ ಶಾಲೆ ತಲೆ ಎತ್ತಿದ್ದರಿಂದ ಕನ್ನಡ ಸೊರಗುತ್ತಿದೆ. ಈ ಪ್ರಭಾವ ತಡೆಯದಿದ್ದರೆ ಕನ್ನಡ ಭಾಷೆಯೇ ಸಾವಿನ ಅಂಚಿಗೆ ಬಂದೀತು. ಭಾಷೆಯ ಉಳಿವಿಗೆ ಬಾಹ್ಯ ಒತ್ತಡ ಅಥವಾ ಪ್ರೋತ್ಸಾಹವಷ್ಟೇ ಸಾಲದು. ಆಂತರಿಕ ಪ್ರಚೋದನೆ ಅಗತ್ಯ. ನಮ್ಮ ಗೃಹಸಂಸ್ಕೃತಿಯಲ್ಲಿ ಕನ್ನಡ ನಾಡಿನ ಸಂಸ್ಕೃತಿಯನ್ನು ಎಷ್ಟು ಅಳವಡಿಸಿಕೊಂಡಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ವಿಚಾರ ಗೋಷ್ಠಿ, ಸಾಧಕರಿಗೆ ಸನ್ಮಾನ

KASAPA 5
ಯಕ್ಷ ಕವಿಗೋಷ್ಠಿ, ಯಕ್ಷಗಾನ, ದೃಶ್ಯ ಭಾಷೆ ಸಂಸ್ಕೃತಿ ವಿಷಯವಾಗಿ ವಿಚಾರಗೋಷ್ಠಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಕಸಾಪ ತಾಲೂಕು ಟಕ ಅಧ್ಯಕ್ಷ ರವಿರಾಜ ಎಚ್​.ಪಿ. ಅಧ್ಯಕ್ಷತೆಯಲ್ಲಿ 20ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಐದು ಸಂ-ಘಸಂಸ್ಥೆಗಳನ್ನು ಗೌರವಿಸಲಾಯಿತು. ಸಾಹಿತಿ ಡಾ. ನಿಕೇತನಾ ಸಮಾರೋಪ ಭಾಷಣ ಮಾಡಿದರು. ಪುಸ್ತಕ ಹಾಗೂ ವಿವಿಧ ಮಳಿಗೆ ತೆರೆಯಲಾಗಿತ್ತು. ಸಾಹಿತಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪುಸ್ತಕ ಮಳಿಗೆ ಉದ್ಘಾಟಿಸಿದರು. ಕುತ್ಪಾಡಿಯ ಎಸ್​ಡಿಎಂ ಆಯುರ್ವೇದ ಆಸ್ಪತ್ರೆ ಸಹಕಾರದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ನಂತರ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಕಾರದಲ್ಲಿ ಯಕ್ಷ ರಂಗಾಯಣ ಕಾರ್ಕಳದವರಿಂದ ಕುಮಾರವ್ಯಾಸ ಭಾರತದ ವಿರಾಟ ಪರ್ವದಿಂದ ಆಯ್ದ ಭಾಗ ಆರೊಡನೆ ಕಾದುವೆನು ನಾಟಕ ಪ್ರದರ್ಶನ ಹಾಗೂ ಯೋನ್ನತಿ ಕಲಾತಂಡದಿಂದ ಚಿತ್ರ ಫಲ್ಗುಣಿ ಯಕ್ಷರೂಪಕ ನಡೆಯಿತು.

ಪೂರ್ವಜರು ನೀಡಿದ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಮೂಲಕ ಎಲ್ಲರ ಜೀವನ ಸಾಗುತ್ತಿದೆ. ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಭಾಷೆಯ ಮೌಲ್ಯ ತಿಳಿಸಬೇಕಿದೆ. ಮಾತೃಭಾಷೆಯಿಂದ ಮಾತ್ರ ಉತ್ತಮ ಸಂಸ್ಕಾರ ಲಭಿಸಲು ಸಾಧ್ಯ. | ಪೂರ್ಣಿಮಾ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹೊಟ್ಟೆಯ ಹಸಿವಿನೊಂದಿಗೆ ಬೌದ್ಧಿಕ ಹಸಿವೂ ಇರಬೇಕು. ಭಾಷೆಯ ಕುರಿತಾಗಿ ದುರಭಿಮಾನ, ನಿರಭಿಮಾನ ಹಾಗೂ ಸದಭಿಮಾನ ಎಂಬ ಮೂರು ಬಗೆಯಿದೆ. ಸರ್ಕಾರ ಮತ್ತು ಪರಿಷತ್​ನಿಂದ ಕನ್ನಡ ಭಾಷೆ ಉಳಿಯದು. ಎಲ್ಲೆಡೆ ಕನ್ನಡ ಜಾರಿ, ಜಾರಿ, ಜಾರಿ ಎನ್ನುತ್ತ ಅದೀಗ ಜಾರಿ ಹೋಗಿದೆ. ಈಗ ಹುಡುಕ್ರೀ, ಹುಡುಕ್ರೀ ಎಂಬಂತಾಗಿದೆ. | ಎಚ್​. ಡುಂಡಿರಾಜ. ಹಾಸ್ಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net