

ಬೆಂಗಳೂರು: ‘ಮನೋಲ್ಲಾಸಕ್ಕೆ ಚಾರಣ ಸುರಕ್ಷತೆಗೆ ಪಣ’ ಎಂಬ ಶೀರ್ಷಿಕೆಯಡಿ ಜು.8ಕ್ಕೆ ವಿಜಯವಾಣಿಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪ್ರವಾಸೋದ್ಯಮ ಇಲಾಖೆಯು ಚಾರಣಿಗರ ಅನುಕೂಲಕ್ಕೆ ಇರುವ ಸೌಲಭ್ಯಗಳನ್ನು ಪರಿಶೀಲನೆ ನಡೆಸಿ ವರದಿ ನೀಡಿದೆ.
ವಿಜಯವಾಣಿಯಲ್ಲಿ ವರದಿ ಪ್ರಕಟವಾದ ನಂತರ ಇಲಾಖೆ ನಿರ್ದೇಶಕರು, ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ವಿಜಯವಾಣಿ ವರದಿಯನ್ನಾಧರಿಸಿ ತಮ್ಮ ವ್ಯಾಪ್ತಿಯಲ್ಲಿ ಬರುವ ಚಾರಣ ಸ್ಥಳಗಳಲ್ಲಿ ಇರುವ ವ್ಯವಸ್ಥೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ನಿರ್ದೇಶಕರ ಸುತ್ತೋಲೆಗೆ ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲಾ ಸಹಾಯಕ ನಿರ್ದೇಶಕರು ತಮ್ಮ ಜಿಲ್ಲೆಗಳಲ್ಲಿರುವ ಚಾರಣ ಸ್ಥಳಗಳು ಮತ್ತು ಅಲ್ಲಿರುವ ವ್ಯವಸ್ಥೆಗಳ ಕುರಿತು ವರದಿ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೆ ಬರುವ ಪ್ರಸಿದ್ಧ ನಂದಿಗಿರಿಧಾಮ (ನಂದಿಬೆಟ್ಟ)ಕ್ಕೆ ಹೋಗಲು ಮೆಟ್ಟಿಲುಗಳು ಕಿರಿದಾಗಿದ್ದು ಮೂಲಭೂತ ಸೌಲಭ್ಯ ಕಲ್ಪಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆಯನ್ನು ನೀಡಲಾಗಿದೆ. ಸ್ಕಂದಗಿರಿ (ಕಳವಾರ ಬೆಟ್ಟ)ಯಲ್ಲಿಯೂ ವಾರಂತ್ಯದಲ್ಲಿ ಚಾರಣಿಗರ ಸಂಖ್ಯೆ ಹೆಚ್ಚಾಗಿದ್ದು, ಈಗಿರುವ ಮೂಲಭೂತ ಸೌಲಭ್ಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ತುಮಕೂರು ಜಿಲ್ಲೆಯ ಪ್ರಸಿದ್ಧ ಸಿದ್ಧರಬೆಟ್ಟದಲ್ಲಿರುವ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಇಲಾಖೆಯು ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸಿದ್ದು, ಸ್ಥಳೀಯ ಮಠದಲ್ಲಿ ಊಟದ ವ್ಯವಸ್ಥೆಯಿದೆ. ಮುಜರಾಯಿ, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಸಮನ್ವಯದಲ್ಲಿ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಪ್ರಸಿದ್ಧ ಸಾವನದುರ್ಗ, ರೇವಣಸಿದ್ಧೇಶ್ವರ ಬೆಟ್ಟ ಮತ್ತು ರಾಮದೇವರ ಬೆಟ್ಟಕ್ಕೆ ಚಾರಣಿಗರು ವರ್ಷಪೂರ್ತಿ ಬರುತ್ತಾರೆ. ಈ ಎಲ್ಲಕಡೆಗಳಲ್ಲಿ ಈಗಿರುವ ಅಗತ್ಯ ಸುರಕ್ಷತಾ ಕ್ರಮಗಳು, ಶೌಚಾಲಯ, ಯಾತ್ರಿನಿವಾಸ ಮತ್ತಿತರ ಅಗತ್ಯ ಸೌಲಭ್ಯಗಳ ಜೊತೆಗೆ ಲಿಫ್ಟ್ ಅಳವಡಿಕೆ, ಸೋಲಾರ್ ಲೈಟ್, ಹ್ಯಾಂಡ್ ರೈಲ್ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಹೊಸದಾಗಿ ಮಂಜೂರಾಗಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೋಜು-ಮಸ್ತಿ ಹೆಸರಿನಲ್ಲಿ ಚಾರಣಕ್ಕೆ ಹೋದವರು ಅಪಾಯಕ್ಕೆ ಸಿಲುಕುವ ಪ್ರಕರಣಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಚಾರಣಪ್ರಿಯರಿಗೆ ಮುನ್ನೆಚ್ಚರಿಕೆ ಮತ್ತು ಅಗತ್ಯ ಸಿದ್ಧತೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ವಿಜಯವಾಣಿ ಪ್ರಕಟಿಸಿದ್ದ ವಿಶೇಷ ವರದಿಗೆ ಪ್ರವಾಸೋದ್ಯಮ ಇಲಾಖೆ ಸ್ಪಂದಿಸಿ ಚಾರಣ ಪ್ರಿಯರ ಅನುಕೂಲಕ್ಕೆ ಮತ್ತಷ್ಟು ಕ್ರಮ ಕೈಗೊಂಡಿರುವುದು ಉತ್ತಮ ಬೆಳವಣಿಗೆ.