ನ್ಯಾ. ಯಶವಂತ್ ವರ್ಮಾ ವಜಾಗೊಳಿಸಲು ಲೋಕಸಭೆಯಲ್ಲಿ ನಿರ್ಣಯ ಮಂಡನೆ ಸಾಧ್ಯತೆ! Yashwant Verma

Yashvant varma
Published on

Yashwant Verma : ನ್ಯಾ. ಯಶವಂತ್ ವರ್ಮಾರನ್ನ ನ್ಯಾಯಮೂರ್ತಿ ಸ್ಥಾನದಿಂದ ವಜಾಗೊಳಿಸಲು ಜು. 21ರಿಂದ ಆರಂಭವಾಗಲಿರುವ ಮಳೆಗಾಲ ಅಧಿವೇಶನದ ವೇಳೆ ಲೋಕಸಭೆಯಲ್ಲಿ ನಿರ್ಣಯ ಮಂಡನೆ ಕೈಗೊಳ್ಳುವ ಸಾಧ್ಯತೆ ಇದೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ನಗದು ಸಿಕ್ಕ ಹಿನ್ನೆಲೆ ನ್ಯಾ. ಯಶವಂತ್ ವರ್ಮಾ ಸುಪ್ರೀಂಕೋರ್ಟ್​ನಿಂದ ದೋಷಾರೋಪಣೆಗೊಳಗಾಗಿದ್ದು, ವರದಿಯನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಮಾತನಾಡಿದ್ದು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ಪದಚ್ಯುತಗೊಳಿಸುವ ಅಧಿಕಾರ ಸಂಸತ್ತಿಗೆ ಇದೆ. ಅದು ಸುಪ್ರೀಂಕೋರ್ಟ್​ನಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳಿದ್ದಾರೆ.

‘ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ದೋಷಾರೋಪಣೆ ರಾಜಕೀಯವಾಗಿರಬಾರದು. ಈ ವಿಷಯದಲ್ಲಿ ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಒಮ್ಮತದಿಂದ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪದಚ್ಯುತ ಪ್ರಕ್ರಿಯೆ ಹೇಗಿರುತ್ತದೆ?

ಪದಚ್ಯುತಗೊಳಿಸುವ ನಿಲುವಳಿ ಸೂಚನೆಗೆ ವಿವಿಧ ಪಕ್ಷಗಳ ಸದಸ್ಯರು ಸಹಿ ಹಾಕುತ್ತಾರೆ. ನ್ಯಾಯಮೂರ್ತಿಗಳ ದೋಷಾರೋಪಣೆ ನಿರ್ಣಯ ಕೈಗೆತ್ತಿಕೊಳ್ಳಲು ಲೋಕಸಭೆಯಲ್ಲಿ ಕನಿಷ್ಠ 100 ಸಂಸದರು ಪ್ರಸ್ತಾವನೆ ಸಲ್ಲಿಸಬೇಕು. ಸಂಸದರು ಪ್ರಸ್ತಾವನೆಯನ್ನು ಸಲ್ಲಿಸಿದ ನಂತರ ಸದನದ ಸಭಾಧ್ಯಕ್ಷರು ಅದನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು. ಪ್ರಸ್ತಾವನೆಯನ್ನು ಸದನ ಅಂಗೀಕರಿಸಿದ್ರೆ ಸ್ಪೀಕರ್, ಸಿಜೆಐ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಸ್ಪೀಕರ್  ಅಧೀನದಲ್ಲಿರುವ ವ್ಯಕ್ತಿ "ವಿಶಿಷ್ಟ ನ್ಯಾಯಶಾಸ್ತ್ರಜ್ಞ" ಸೇರಿದಂತೆ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಬೇಕು. ಆ ಸಮಿತಿ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ರೆ  ಸದನದಲ್ಲಿ ವರದಿ ಅಂಗೀಕರಿಸಿ ನ್ಯಾಯಮೂರ್ತಿಗಳ ಪದಚ್ಯುತಿ ಬಗ್ಗೆ ಚರ್ಚಿಸಲಾಗುತ್ತದೆ.

ಮಳೆಗಾಲದ ಅಧಿವೇಶನದಲ್ಲಿಯೇ ನ್ಯಾಯಮೂರ್ತಿಗಳ ಪದಚ್ಯುತ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಮಾರ್ಗಗಳನ್ನು ಅನ್ವೇಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net