

ಬ್ರಿಡ್ಜ್‌ಟೌನ್: ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡದ ಸೋಲಿನ ನಂತರ ಕೋಚ್ ಹುದ್ದೆ ತ್ಯಜಿಸಲು ಬಯಸಿದ್ದೆ. ಆದರೆ ನಾಯಕ ರೋಹಿತ್ ಶರ್ಮಾ ನನ್ನನ್ನು ತಡೆದರು ಎಂದು ರಾಹುಲ್ ದ್ರಾವಿಡ್ ಬಹಿರಂಗಪಡಿಸಿದ್ದಾರೆ.
ಆಗ ರಾಹುಲ್ ತೀರ್ಮಾನವನ್ನು ರೋಹಿತ್ ತಡೆದ ಪರಿಣಾಮ ಈಗ ಟಿ20 ವಿಶ್ವಕಪ್ ಯಶಸ್ಸನ್ನು ಆನಂದಿಸಲು ಸಾಧ್ಯವಾಗಿದೆ. ಇದಕ್ಕಾಗಿ ರೋಹಿತ್ ಶರ್ಮಾಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವಿಶ್ವಕಪ್ ಗೆದ್ದ ನಂತರ ಕೋಚ್ ಹುದ್ದೆಗೆ ವಿದಾಯ ಹೇಳಿದ ರಾಹುಲ್ ಅಂತಿಮವಾಗಿ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಸದಸ್ಯರೊಂದಿಗೆ ಮಾತನಾಡಿದರು.
ನವೆಂಬರ್‌ನಲ್ಲಿ ನನಗೆ ಕರೆ ಮಾಡಿ ನನ್ನನ್ನು ಕೋಚ್ ಆಗಿ ಮುಂದುವರಿಯಲು ಕೇಳಿಕೊಂಡಿದ್ದೀರಿ. ಟೀಂ ಇಂಡಿಯಾದ ಪ್ರತಿಯೊಬ್ಬ ಸದಸ್ಯರೊಂದಿಗೆ ಕೆಲಸ ಮಾಡುವುದು ಗೌರವವಾಗಿದೆ. ಆದರೆ ನನ್ನೊಂದಿಗೆ ತುಂಬಾ ಸಮಯ ಕಳೆದ ರೋಹಿತ್‌ಗೆ ವಿಶೇಷ ಧನ್ಯವಾದಗಳು. ನಾವು ತುಂಬಾ ಮಾತನಾಡಿದ್ದೇವೆ. ಕೆಲವೊಮ್ಮೆ ನಾವು ಒಪ್ಪಿದ್ದೇವೆ. ಕೆಲವೊಮ್ಮೆ ರಾಜೀ ಆಗಿದ್ದೇವೆ. ತಂಡದ ಹೋರಾಟದ ಮನೋಭಾವ ಮತ್ತು ಸ್ಥಿರತೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ನಾವು ಟಿ.20 ವಿಶ್ವಕಪ್ ಗೆಲ್ಲುವ ಬಗ್ಗೆ ಹಾಕಿಕೊಂಡಿದ್ದ ಆ ಗೆರೆಯನ್ನು ದಾಟಿದ್ದೇವೆ. ಈಗ ಹಿಂತಿರುಗಿ ಕಷ್ಟ ಸುಖದ ಕ್ಷಣಗಳನ್ನು ಮೆಲುಕು ಹಾಕೋಣ. ಜೊತೆಗಿದ್ದ ಸಮಯವನ್ನು ಆನಂದಿಸೋಣ ಎಂದು ಅವರು ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.