More

    ಶಿರಾದಲ್ಲಿ ಮೊಳಗಿದ ಕಾಂಗ್ರೆಸ್ ಕಹಳೆ ; ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಶಕ್ತಿಪ್ರದರ್ಶನ ಮಾಡಿದ ಜಯಚಂದ್ರ

    ಶಿರಾ: ಶಿರಾ ಉಪಸಮರದಲ್ಲಿ ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದ್ದು, ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು.

    ಟಿಕೆಟ್ ಕೈ ತಪ್ಪುವ ಆತಂಕದಿಂದಲೇ ತರಾತುರಿಯಲ್ಲಿ ಬಿ.ಾರಂ ಇಲ್ಲದೆಯೇ ನಾಮಪತ್ರ ಸಲ್ಲಿಸಿದ್ದ ಜಯಚಂದ್ರ ಗುರುವಾರ ಸಾವಿರಾರು ಜನರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಮತ್ತೊಮ್ಮೆನಾಮಪತ್ರ ಸಲ್ಲಿಸಿದರು. ಈವರೆಗೆ ನಾಲ್ಕು ಸೆಟ್ ನಾಮಪತ್ರವನ್ನು ಜಯಚಂದ್ರ ಸಲ್ಲಿಸಿದಂತಾಗಿದ್ದು, ಚುನಾವಣೆ ರಣಕಹಳೆಯನ್ನು ಕಾಂಗ್ರೆಸ್ ಮೊಳಗಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಖಾಡಕ್ಕಿಳಿದಿದ್ದು ಚುನಾವಣೆ ಕಾವೇರಿದೆ.

    ಮೆರವವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರಾದರೂ ರಾಜ್ಯ ನಾಯಕರಿಗೆ ಮುಖ ತೋರಿಸುವ ಉದ್ದೇಶದಿಂದ ಶಿರಾ ಹೊರಗಿನ ತಾಲೂಕು, ಜಿಲ್ಲೆಗಳ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೂರಾರು ಕಾರುಗಳು ಮೆರವಣಿಗೆಯಲ್ಲಿ ಜನದಟ್ಟಣೆಗೆ ಕಾರಣವಾಗಿತ್ತು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಡಿ.ಕೆ.ಶಿವಕುಮಾರ್, ಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ತಂತ್ರದ ಬಗ್ಗೆ ತಾಲೂಕಿನ ಜನರಿಗೆ ಸ್ಪಷ್ಟ ತಿಳುವಳಿಕೆಯಿದ್ದು, ಜನರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು. ಶಾಸಕ ಡಾ.ಜಿ.ಪರಮೇಶ್ವರ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕರಾದ ವೆಂಕಟರಮಣಪ್ಪ, ಲಕ್ಷ್ಮೀಹೆಬ್ಬಾಳಕರ್, ಯು.ಟಿ.ಖಾದರ್, ಡಿ.ಸುಧಾಕರ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಎಸ್.ಪಿ.ಮುದ್ದಹನುಮೇಗೌಡ, ಡಾ.ಸಾಸಲು ಸತೀಶ್ ಮತ್ತಿತರರ ಮುಖಂಡರು ಇದ್ದರು.

    ಕಾಂಗ್ರೆಸ್ ಮುಖಂಡರಿಂದ ಕಾಡುಗೊಲ್ಲರ ಜಪ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಕಾಡುಗೊಲ್ಲರ ಒಲೈಕೆ ಕುರಿತೇ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರಿಗೆ ಕಾಡುಗೊಲ್ಲರು ಕ್ಷೇತ್ರದಲ್ಲಿ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಮುಖಂಡರು ಅವರ ಒಲೈಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಶಿರಾ ಕ್ಷೇತ್ರದಲ್ಲಿ ನಡೆಸಿದ್ದ ಕಾಡುಗೊಲ್ಲರ ಸಭೆಯ ಮುಂದಿನ ಸಾಲಿನಲ್ಲಿ ಯಾವೊಬ್ಬ ಕಾಡುಗೊಲ್ಲರೂ ಕುಳಿತಿರಲಿಲ್ಲ ಎಂಬುದು ಆಶ್ಚರ್ಯ ಮೂಡಿಸಿತ್ತು. ಡಿಸಿಸಿ ಕಾರ್ಯಾಧ್ಯಕ್ಷ ಕಾಡುಗೊಲ್ಲ ಸಮುದಾಯದ ಡಾ.ಸಾಸಲು ಸತೀಶ್ ಸಭೆಯಲ್ಲಿ ಮಾತನಾಡುವಾಗ ಜಯಚಂದ್ರ ಶಿರಾ ಕ್ಷೇತ್ರದಲ್ಲಿ ಕಾಡುಗೊಲ್ಲರಿಗೆ ಜಿಪಂ, ತಾಪಂ ಟಿಕೆಟ್ ನೀಡದೆ ವಂಚಿಸಿದ್ದನ್ನು ಪ್ರಸ್ತಾಪಿಸಿ ಕೇವಲ ಸಮುದಾಯ ಭವನ ನೀಡಿದ್ದೇ ದೊಡ್ಡ ಸಾಧನೆ ಎಂದು ಹೇಳಿಕೊಂಡರೆ ಸಾಲದು ಎಂದು ನೇರವಾಗಿ ಹೇಳಿದ್ದು ಸಮುದಾಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.
    ಈ ಹಿನ್ನೆಲೆಯಲ್ಲಿ ಗುರುವಾರ ಶಿವಕುಮಾರ್ ಕೂಡ ಕಾಡುಗೊಲ್ಲರ ಕುರಿತೇ ಮಾತನಾಡಿದ್ದಾರೆ. ಕುರುಬ ಸಮುದಾಯದ ಕಲ್ಕರೆ ರವಿಕುಮಾರ್ ಸೇರ್ಪಡೆಯ ನಂತರ ಕಾಡುಗೊಲ್ಲ ಮುಖಂಡರು ಕಾಂಗ್ರೆಸ್ ಜತೆ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದಾರೆ ಎನ್ನಲಾಗಿದೆ.

    ತಿಮ್ಮರಾಜ್‌ಗೌಡ ಪಕ್ಷೇತರ ಅಭ್ಯರ್ಥಿ :ಶೇಂಗಾ ನಾಡು ಖ್ಯಾತಿಯ ತಿಮ್ಮರಾಜ್‌ಗೌಡ ಪಕ್ಷೇತರರಾಗಿ ಗುರುವಾರ ನಾಮಪತ್ರ ಸಲ್ಲಿಸಿದರು, ಪ್ರವಾಸಿ ಮಂದಿರ ವೃತ್ತದಿಂದ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಗಿರೀಶ್ ನ್ಯಾಷನಲ್ ಕಮ್ಯೂನಿಸ್ಟ್ ಪಾರ್ಟಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರದ ಅಂತ್ಯಕ್ಕೆ ಒಟ್ಟಾರೆ ಆರು ಜನರಿಂದ ಹತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಚಂದ್ರ(4), ಜೆಡಿಎಸ್‌ನಿಂದ ಅವ್ಮಾಜಮ್ಮ(2)ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್‌ಗೌಡ, ಬಿ.ಟಿ.ಓಬಳೇಶಪ್ಪ, ತಿಮ್ಮರಾಜ್‌ಗೌಡ ಮತ್ತು ಗಿರೀಶ್ ತಲಾ ಒಂದು ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

    ಇಂದು ಬಿಜೆಪಿ ಶಕ್ತಿ ಪ್ರದರ್ಶನ:ಕರೊನಾವನ್ನೂ ಲೆಕ್ಕಿಸದೇ ಜೆಡಿಎಸ್ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಶಕ್ತಿಪ್ರದರ್ಶಿಸಿ ನಾಮಪತ್ರ ಸಲ್ಲಿಸಿದ್ದು ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಕೂಡ ತಮ್ಮೆಲ್ಲಾ ಸಂಪನ್ಮೂಲ ಬಳಸಿಕೊಂಡು ಶುಕ್ರವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
    ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಬಿಜೆಪಿ ರ‌್ಯಾಲಿಯಲ್ಲಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ಸಚಿವ ಜೆ.ಸಿ.ಮಾಧುಸ್ವಾಮಿ, ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾಧ್ಯಕ್ಷ ಬಿ.ಸುರೇಶ್ಗೌಡ, ಸಂಸದ ಎ.ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ.

    ಚುನಾವಣೆ ಗಿಮಿಕ್ : ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸವಾಗಿಲ್ಲ. ಆದರೆ, ಸರ್ಕಾರದ ಖಜಾನೆ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡುವುದು ಸರಿಯೇ? ಹೋಗಲಿ ಕನಿಷ್ಠ ನೂರು ಕೋಟಿ ಹಣವನ್ನಾದರೂ ಇಟ್ಟಿದ್ದಾರಾ? ಅದು ಇಲ್ಲ. ಇದೆಲ್ಲ ಚುನಾವಣೆ ಗಿಮಿಕ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

    ಲೂಟಿ ಹೊಡೆಯುವ ಸರ್ಕಾರ : ರಾಜ್ಯದಲ್ಲಿ ಜನ ವಿರೋಧಿ, ನಿಷ್ಕ್ರಿಯ ಹಾಗೂ ಲೂಟಿ ಹೊಡೆಯುವ ಸರ್ಕಾರ ಇದೆ. ಈ ಉಪಚುನಾವಣೆ ಭ್ರಷ್ಟ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು. ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಮತದಾರರು ರಾಜ್ಯದ ನಿಷ್ಕ್ರೀಯ ಸರ್ಕಾರದ ವಿರುದ್ಧ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಬೆಂಬಲಿಸಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಮುಂದಿನ ದಿನಗಳಲ್ಲಿ ಈ ಲೂಟಿಕೋರ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಈ ಉಪಚುನಾವಣೆಯಲ್ಲಿ ದಿಕ್ಸೂಚಿಯಾಗಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts