ಕಡೆಗೂ ಹೊರಬಿದ್ದ ದೇಶೀಯ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ, ಮೊದಲಿಗೆ ನಡೆಯುವ ಟೂರ್ನಿ ಯಾವುದು?

syed mushtaq ali trophy for web
Published on

ನವದೆಹಲಿ: ಜನವರಿ 10 ರಿಂದ 31 ರವರೆಗೆ ಬಹುನಿರೀಕ್ಷಿತ ದೇಶೀಯ ಚುಟುಕು ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಯೋಜಿಸಲಾಗುತ್ತಿದೆ. ಬಯೋ ಸುರಕ್ಷತಾ ವಲಯದಲ್ಲಿ 6 ರಾಜ್ಯಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಜನವರಿ 2 ರೊಳಗೆ ಬಯೋ ಸುರಕ್ಷತಾ ವಲಯ ಪ್ರವೇಶಿಸಬೇಕು ಎಂದು ಬಿಸಿಸಿಐ ಆದೇಶಿಸಿದೆ. ಆದರೆ, ಟೂರ್ನಿಯ ಅಂತಿಮ ವೇಳಾಪಟ್ಟಿ ಇನ್ನು ಅಂತಿಮಗೊಂಡಿಲ್ಲ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು, ಮುಷ್ತಾಕ್ ಅಲಿ ಟ್ರೋಫಿಗೆ ಸಜ್ಜಾಗಬೇಕೆಂದು ತಿಳಿಸಿದ್ದಾರೆ. ರಣಜಿ ಟ್ರೋಫಿ ಆಯೋಜನೆ ಕುರಿತು ಸ್ಪಷ್ಟ ಮಾಹಿತಿ ನೀಡಲಾಗಿಲ್ಲ. ಕರೊನಾ ವೈರಸ್ ಭೀತಿಯಿಂದಾಗಿ ದೇಶೀಯ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯನ್ನು ಇದುವರೆಗೂ ಪ್ರಕಟಿಸಲು ಸಾಧ್ಯವಾಗಿರಲಿಲ್ಲ.

‘ರಾಜ್ಯ ಸಂಸ್ಥೆಗಳು ನೀಡಿದ ಮಾಹಿತಿಯನ್ನು ಆಧರಿಸಿ 2020-21ನೇ ಸಾಲಿನ ದೇಶೀಯ ಕ್ರಿಕೆಟ್ ಚಟುವಟಿಕೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಮೊದಲಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆರಂಭಗೊಳ್ಳಲಿದೆ’ ಎಂದು ಜಯ್ ಷಾ ರಾಜ್ಯ ಸಂಸ್ಥೆಗಳಿಗೆ ಬರೆದಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. 2021ರ ಜನವರಿ 2ರೊಳಗೆ (ಶನಿವಾರ) ಆಟಗಾರರು ಸುರಕ್ಷತಾ ವಲಯ ಪ್ರವೇಶಿಸಬೇಕು. ಬಳಿಕ ಜನವರಿ 10ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಜನವರಿ 31 ರಂದು ಫೈನಲ್ ಪಂದ್ಯ ನಡೆಯಲಿದೆ’ ಎಂದು ಜಯ್ ಷಾ ತಿಳಿಸಿದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡ ಬಳಿಕವಷ್ಟೇ ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ದೇಶೀಯ ಇತರ ಟೂರ್ನಿಗಳನ್ನು ಆಯೋಜಿಸುವ ಕುರಿತು ರಾಜ್ಯ ಸಂಸ್ಥೆಗಳಿಂದ ಪ್ರತಿಕ್ರಿಯೆ ಪಡೆಯಲಾಗುವುದು. ರಾಜ್ಯ ಸಂಸ್ಥೆಗಳು ಟೂರ್ನಿ ಆಯೋಜನೆ ಬಗ್ಗೆ ಅಗತ್ಯ ಸಲಹೆ ಜತೆಗೆ ಸಿದ್ಧತೆ ಕೈಗೊಳ್ಳಬೇಕು ಎಂದು ಷಾ ಹೇಳಿದ್ದಾರೆ.

* ಆಟಗಾರರ ಹರಾಜು ಪ್ರಕ್ರಿಯೆ ಕಾರಣ..!

ಫೆಬ್ರವರಿ ತಿಂಗಳಲ್ಲಿ 14ನೇ ಆವೃತ್ತಿಯ ಐಪಿಎಲ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿರುವುದರಿಂದ ಮೊದಲಿಗೆ ಚುಟುಕು ಕ್ರಿಕೆಟ್ ಟೂರ್ನಿ ಆಯೋಜಿಸಲಾಗುತ್ತಿದೆ. 14ನೇ ಐಪಿಎಲ್‌ನಲ್ಲಿ 9 ಅಥವಾ 10 ತಂಡಗಳು ಕಣಕ್ಕಿಳಿಯುವ ಸಾಧ್ಯತೆಗಳಿರುವುದರಿಂದ ಹೆಚ್ಚು ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆಗಳಿದ್ದು, ಹೀಗಾಗಿ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಮೊದಲಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮಣೆ ಹಾಕಲಾಗಿದೆ. ಚುಟುಕು ಕ್ರಿಕೆಟ್ ಬಳಿಕ ವಿಜಯ್ ಹಜಾರೆ ಅಥವಾ ದೇಶೀಯ ಕ್ರಿಕೆಟ್‌ನ ಸಾಂಪ್ರದಾಯಿಕ ಟೂರ್ನಿ ರಣಜಿ ಟ್ರೋಫಿ ಆಯೋಜಿಸುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net