ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಪಿವಿ ಸಿಂಧುಗೆ ನಿರಾಸೆ

pv sindhu lost for web
Published on

ಬಸಿಲ್: ವಿಶ್ವ ಚಾಂಪಿಯನ್ ಪಿವಿ ಸಿಂಧು, ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದರು. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು 12-21, 5-21 ನೇರ ಗೇಮ್‌ಗಳಿಂದ ಒಲಿಂಪಿಕ್ ಚಾಂಪಿಯನ್ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರು ಕೇವಲ 35 ನಿಮಿಷಗಳ ಹೋರಾಟದಲ್ಲಿ ಸೋಲನುಭವಿಸಿದರು. ಎರಡೂ ಗೇಮ್‌ಗಳಲ್ಲಿ ಮರಿನ್ ತೋರಿದ ಆಕ್ರಮಣಕಾರಿ ನಿರ್ವಹಣೆ ಎದುರು ಸಿಂಧು ಪ್ರತಿಹೋರಾಟ ತೋರಲು ವಿಫಲರಾದರು. ಎರಡು ವರ್ಷಗಳ ಬಳಿಕ ಸ್ಪೇನ್ ಆಟಗಾರ್ತಿ ಎದುರು ಹೋರಾಡಿದ ಸಿಂಧು ಕನಿಷ್ಠ ಪ್ರಬಲ ಪೈಪೋಟಿ ನೀಡಲು ವಿಫಲರಾದರು.

ಇದರೊಂದಿಗೆ 2019ರ ಆಗಸ್ಟ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಪಟ್ಟ ಅಲಂಕರಿಸಿದ ಬಳಿಕ ಸಿಂಧು ಪ್ರಶಸ್ತಿ ಬರ ಮುಂದುವರಿದಂತಾಗಿದೆ. 2019ರ ವಿಶ್ವ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಬಳಿಕ ಸಿಂಧು ಆಡಿದ ಮೊದಲ ಪ್ರಶಸ್ತಿ ಸುತ್ತಿನ ಪಂದ್ಯ ಇದಾಗಿತ್ತು. ಮರಿನ್ ಎದುರು ಆಡಿದ 14ನೇ ಪಂದ್ಯದಲ್ಲಿ ಸಿಂಧು ಅನುಭವಿಸಿದ 9ನೇ ಸೋಲು ಇದಾಗಿದೆ. ಜತೆಗೆ ಮರಿನ್ ಎದುರು ಅನುಭವಿಸಿದ ಸತತ ಮೂರನೇ ಸೋಲು ಇದಾಗಿದೆ. ಕಳೆದ ಜನವರಿಯಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಸೂಪರ್-1000 ಹಾಗೂ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನ ಟೂರ್ನಿಯಲ್ಲೂ ಸಿಂಧು ಮರಿನ್‌ಗೆ ಶರಣಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net