ದೀರ್ಘಕಾಲೀನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ...

DC Udupi
Published on

ಉಡುಪಿ ಜಿಲ್ಲಾ ನೂತನ ಡಿಸಿ ಸ್ವರೂಪಾ ಭರವಸೆ

ಕಾನೂನು ಚೌಕಟ್ಟಿನಲ್ಲಿ ಅಭಿವೃದ್ಧಿಗೆ ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಉಡುಪಿ

ಆಡಳಿತಾತ್ಮಕ ಕೆಲಸ ಎಲ್ಲ ಇಲಾಖೆಯಲ್ಲೂ ಇರುತ್ತದೆ. ಆದರೆ, ಜಿಲ್ಲಾಧಿಕಾರಿ ಹುದ್ದೆ ಸವಾಲಿನಿಂದ ಕೂಡಿರುತ್ತದೆ. ಡಿಸಿಯ ಕರ್ತವ್ಯದಲ್ಲಿ ಹಲವಾರು ದೃಷ್ಟಿಕೋನ ಸೇರಿಕೊಂಡಿರುತ್ತದೆ. 'ಬುದ್ಧಿವಂತರ ಜಿಲ್ಲೆ' ಎಂಬ ಖ್ಯಾತಿ ಹೊಂದಿರುವ ಉಡುಪಿ ಜಿಲ್ಲೆಯಲ್ಲಿರುವ ದೀರ್ಘಕಾಲೀನ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆ ನೀಡುವುದಾಗಿ ನೂತನ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭರವಸೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂನ್ 19ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಇಲಾಖಾ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮದವರ ಸಹಕಾರ ಅಗತ್ಯ ಎಂದರು.

ಅಭಿವೃದ್ಧಿಗೆ ಪ್ರಯತ್ನ

ಈಗಷ್ಟೇ ಆಡಳಿತ ಆರಂಭಿಸಿದ್ದರಿಂದ ಜಿಲ್ಲೆಯ ಸಮಸ್ತ ಚಿತ್ರಣ ತಿಳಿದುಕೊಳ್ಳಬೇಕಿದೆ. ಮರಳು ಮಾಫಿಯಾ ಸೇರಿದಂತೆ ಎಲ್ಲ ಪ್ರಕಾರದ ಅಕ್ರಮ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಿ ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನೂ ನಿಭಾಯಿಸಲಾಗುವುದು. ಬುಡಕಟ್ಟು ಜನರ ಸಮಸ್ಯೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ, ಮನೆ ನಿರ್ಮಾಣದ 9/11 ಫಾರ್ಮ್ ಸಮಸ್ಯೆ, ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿನ ಸಮಸ್ಯೆ ನಿವಾರಿಸಿ ಜನಸಾಮಾನ್ಯರಿಗೆ ಅನುಕೂಲ ಆಗುವಂತಹ ಎಲ್ಲ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಟೆಕ್ಸ್​ಟೈಲ್​ ಇಂಜಿನಿಯರಿಂಗ್​ ವಿದ್ಯಾಭ್ಯಾಸ

Udupi DC
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., 2012ರ ಐಎಎಸ್​ ಬ್ಯಾಚ್​ನವರಾಗಿದ್ದಾರೆ. ಬೆಂಗಳೂರು ನಿವಾಸಿಯಾದ ಅವರು, ದೆಹಲಿಯಲ್ಲಿ ಟೆಕ್ಸ್​ಟೈಲ್​ ಇಂಜಿನಿಯರಿಂಗ್​ ವಿದ್ಯಾಭ್ಯಾಸ ಮುಗಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಒಂದೂವರೆ ವರ್ಷ ಜಿಪಂ ಸಿಇಒ ಆಗಿ ಆಡಳಿತಾತ್ಮಕ ಸೇವೆ ಸಲ್ಲಿಸಿದ ಅನುಭವ ಇದೆ. ಬೆಂಗಳೂರಿನ ಆರ್​ಡಿಪಿಆರ್​ನಲ್ಲಿ ಇ-ಗವರ್ನೆನ್ಸ್​ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನೇರ ಐಎಎಸ್​, ಕೆಎಎಸ್​ ಪ್ರಮೋಷನ್​ ಹಾಗೂ ಇಲಾಖೆಯ ಶೇ.2ರ ಮಾನದಂಡದ ಪದೋನ್ನತಿಯಲ್ಲಿ ಡಿಸಿ ಆಗಲು ಅವಕಾಶವಿದ್ದು, ಸ್ವರೂಪಾ ಅವರು ಕೈಗಾರಿಕಾ ಇಲಾಖೆಯ ಶೇ.2ರ ಮಾನದಂಡದ ಆಧಾರದಲ್ಲಿ ಜಿಲ್ಲಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ.

ಹೊಸ ಡಿಸಿಗೂ ರಜೆಯ ಬೇಡಿಕೆ!

ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದಾಗಿ ಶಾಲಾ ಮಕ್ಕಳಿಗೆ ಜೀವಾಪಾಯ ಆಗಬಾರದೆಂದು ಹಿಂದಿನ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಶಾಲೆಗೆ ರಜಾ ನೀಡುವ ಮೂಲಕ ಪಾಲಕರು ಹಾಗೂ ಮಕ್ಕಳಿಗೆ ನೆಚ್ಚಿನ ಅಧಿಕಾರಿಯಾಗಿದ್ದರು. ಇದೀಗ ಜೂ.17ರಂದು ರಾತ್ರಿ ಉಡುಪಿ ಜಿಲ್ಲಾಧಿಕಾರಿಯಾಗಿ ಪದೋನ್ನತಿ ಹೊಂದುತ್ತಿದ್ದಂತೆಯೇ ಸ್ವರೂಪಾ ಅವರ ಇನ್​ಸ್ಟಾಗ್ರಾಂಗೆ, 'ಮೇಡಂ, ಉಡುಪಿ ಜಿಲೆಯಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮನೆಯಿಂದ ಹೊರ ಬರಲೂ ಆಗುತ್ತಿಲ್ಲ. ಶಾಲೆಗಳಿಗೆ ರಜೆ ನೀಡಿ' ಎಂದು ಸಂದೇಶ ಬಂದಿದ್ದಾಗಿ ನೂತನ ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ ಪರಿಸರ ಪೂರಕ ಕೈಗಾರಿಕೆ ಆರಂಭಿಸಲು ಸೂಕ್ತ ಪ್ರೋತ್ಸಾಹ ನೀಡಲಾಗುವುದು. ಈ ವಿಚಾರವಾಗಿ ಕೆಲವರು ಈಗಾಗಲೇ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಸಿಬ್ಬಂದಿ, ನೌಕರರ ಕೊರತೆ ಇದ್ದು, ಇರುವ ವ್ಯವಸ್ಥೆಯಲ್ಲಿಯೇ ಉತ್ತಮವಾಗಿ ಕರ್ತವ್ಯ ನಿಭಾಯಿಸಲಾಗುವುದು. | ಸ್ವರೂಪಾ ಟಿ.ಕೆ. ನೂತನ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net