

ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಜತೆಗೆ ವಿವಾಹವಾಗಿದ್ದರು. ಇದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಬ್ಬರೂ ಕಳೆದ ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು.
ಇದೀಗ ಸ್ವರಾ ಭಾಸ್ಕರ್ ಮತ್ತು ಫಹಾದ್ ಸಾಂಪ್ರದಾಯಿಕವಾಗಿ ವಿವಾಹವಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕುರಿತ ಆಹ್ವಾನ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದೆ. ಇವರಿಬ್ಬರ ಸಾಂಪ್ರದಾಯಿಕ ವಿವಾಹ ದೆಹಲಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನ ಪತ್ರಿಕೆಯನ್ನು ಪ್ರತೀಕ್ ಮತ್ತು ಅನುಪಮ್ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಈ ಬಗ್ಗೆ ಪ್ರತೀಕ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸ್ವರಾ ಮತ್ತು ಫಹದ್ ಪ್ರತಿಭಟನೆಯ ಸಂದರ್ಭದಲ್ಲಿ ಹೇಗೆ ಭೇಟಿಯಾದರು? ನಂತರ ಪ್ರೀತಿ ಹೇಗೆ ಚಿಗುರಿತು? ಜತೆಗೆ ಮುಂಬೈ ಮತ್ತು ಮರೀನ್ ಡ್ರೈವ್ನ ನೆನಪು, ಸಿನಿಮಾ ಮೇಲಿನ ಪ್ರೀತಿ ಹಾಗೂ ನೆಚ್ಚಿನ ಗಾಲಿಬ್ ಎಂಬ ಬೆಕ್ಕನ್ನು ಕೇಂದ್ರೀಕರಿಸಿಕೊಂಡು ಆಮಂತ್ರಣ ಪತ್ರ ವಿನ್ಯಾಸಗೊಳಿಸಬೇಕೆಂದು ಹೇಳಿದ್ದರು ಎಂದು ಪ್ರತೀಕ್ ಮತ್ತು ಅನುಪಮ್ ಬರೆದುಕೊಂಡಿದ್ದಾರೆ.