

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 154ನೇ ಜನ್ಮದಿನ ನಿಮಿತ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಮಂದಿ ‘ಸ್ವಚ್ಛತಾ ಹೀ ಸೇವಾ ಶ್ರಮದಾನ’ದಲ್ಲಿ ಪಾಲ್ಗೊಂಡು 20 ಟನ್ ತ್ಯಾಜ್ಯವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದಿಂದ ನಗರದ ಕೆರೆಗಳು, ರೈಲ್ವೆ ನಿಲ್ದಾಣ, ರಸ್ತೆ ಬದಿ, ಮೇಲ್ಸೇತುವೆ ಕೆಳಗೆ, ಕೊಳೆಗೇರಿ ಪ್ರದೇಶಗಳು, ಮಾರುಕಟ್ಟೆ ಸ್ಥಳಗಳು, ಆರಾಧನೆ ಸ್ಥಳಗಳು, ಉದ್ಯಾನವನ, ಬಸ್ ನಿಲ್ದಾಣ, ಪ್ರಮುಖ ಜಂಕ್ಷನ್, ಶಾಲಾ/ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಇತರ ಸ್ಥಳಗಳಲ್ಲಿ ನಾಗರಿಕರು, ಸ್ಥಳೀಯ ಎನ್‌ಜಿಒಗಳು, ಎನ್‌ಎಸ್‌ಎಸ್/ಎನ್‌ಸಿಸಿ ವಿದ್ಯಾರ್ಥಿಗಳು, ಆರ್‌ಡಬ್ಲ್ಯುಎಗಳ ಸ್ವಯಂಸೇವಕರು, ಬಿಎಸ್‌ಎ್ ಯೋಧರು, ಅಗ್ಲಿ ಇಂಡಿಯನ್ಸ್ ಸಂಘಟನೆ, ಸರ್ಕಾರಿ ಅಧಿಕಾರಿಗಳು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು 1,900ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಚತಾ ಅಭಿಯಾನದ ವೇಳೆ ರಸ್ತೆಗಳು, ಬೀದಿ ಮತ್ತು ಇನ್ನಿತರ ಸ್ಥಳಗಳು ಸೇರಿಂದಂತೆ ಅಂದಾಜು 4,000 ಕಿ.ಮೀ. ಪ್ರದೇಶದಲ್ಲಿ ಸುಮಾರು 20 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಸಂಗ್ರಹವಾದ ತ್ಯಾಜ್ಯವನ್ನು ಒಣ ಹಾಗೂ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಆಟೋ ಟಿಪ್ಪರ್‌ಗಳ ಮೂಲಕ ಕಾಂಪ್ಯಾಕ್ಟರ್‌ಗಳಿಗೆ ಹಾಕಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು. ಇದೇ ವೇಳೆ ರಸ್ತೆಗಳ ಬದಿ ಕಸ ಬಿಸಾಡದಂತೆ ಹಾಗೂ ಎಲ್ಲೆಡೆ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಯಿತು.
* ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್ ನೇತೃತ್ವದಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ಸಹಿತ ಇತರರು ಕೋರಮಂಗಲದ 80 ಅಡಿ ರಸ್ತೆಯ ಪಾಸ್ ಪೋರ್ಟ್ ಕಚೇರಿ ಬಳಿ ಸ್ವಚ್ಛತಾ ಕಾರ್ಯ.
* ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಯಲಹಂಕ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಹೀಮ್ ಸೇರಿದಂತೆ ಇತರರು ಯಲಹಂಹ ಹಳೆಯ ಪಟ್ಟಣ, ಸರ್ಕಾರಿ ಆಸ್ಪತ್ರೆ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಎ.ಕೆ.ಕಾಲೋನಿ ಸುತ್ತಮುತ್ತ ಶುಚಿಗೊಳಿಸಿದರು.
* ಎನ್‌ಜಿಟಿ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ ನ್ಯಾ. ಸುಭಾಷ್ ಬಿ. ಅಡಿ ಅವರು ಸಂಜಯನಗರ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್ ನೇತೃತ್ವದಲ್ಲಿ ಡಾಲರ್ಸ್
ಕಾಲೋನಿಯ ಮುಖ್ಯರಸ್ತೆಯಲ್ಲಿ ತ್ಯಾಜ್ಯ ಸಂಗ್ರಹಿಸಿದರು.
* ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ನೇತೃತ್ವದಲ್ಲಿ ಹೈಕೋರ್ಟ್ ಆವರಣದಲ್ಲಿ ನ್ಯಾಯಾಧೀಶರು, ಕಬ್ಬನ್ ಪಾರ್ಕ್‌ನ ಸಿಬ್ಬಂದಿ ಸ್ವಚ್ಚತೆ ಕೈಗೊಂಡರು.