

ವಿಜಯವಾಣಿ ಸುದ್ದಿಜಾಲ ಉಡುಪಿ
ಸ್ಥಳೀಯಾಡಳಿತ ತನ್ನ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ತೊಟ್ಟಂ ವ್ಯಾಪ್ತಿಯ ಹಲವು ಪ್ರದೇಶಗಳು ಕಸದಿಂದಾಗಿ ಮಲಿನಗೊಂಡಿದೆ. ಈ ಕುರಿತು ಸಾರ್ವಜನಿಕರು ಮೌನವಾಗಿರದೆ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ತೊಟ್ಟಂ ಚರ್ಚ್ನ ಧರ್ಮಗುರು ವಂ.ಡೆನಿಸ್ ಡೆಸಾ ಅಭಿಮತ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಕಥೊಲಿಕ್ ಸಭಾ, ಯುವ ಆಯೋಗ, ಮಹಿಳಾ ಆಯೋಗ ಮತ್ತು ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯ ವತಿಯಿಂದ ತೊಟ್ಟಂ ಪರಿಸರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತೊಟ್ಟಂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಚೇರಿಯಿಂದ ಆರಂಭಿಸಿ ಬಡಾನಿಡಿಯೂರು ಶಾಲೆಯ ವರೆಗೆ 5 ಗುಂಪುಗಳಾಗಿ ತಂಡ ರಚಿಸಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸ ಸಂಗ್ರಹಿಸಿ ಪರಿಸರ ಸ್ವಚ್ಛಗೊಳಿಸಲಾಯಿತು. ಸ್ಥಳೀಯ ಮುಸ್ಲಿಂ ಮಹಿಳಾ ಸಂಘಟನೆಯವರೂ ಪಾಲ್ಗೊಂಡಿದ್ದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಕಥೊಲಿಕ್ ಸಭಾ ಅಧ್ಯಕ್ಷೆ ವೀಣಾ ಫೆರ್ನಾಂಡಿಸ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಿಯಾ ರೊಡ್ರಿಗಸ್ ಹಾಗೂ ಇತರರು ಉಪಸ್ಥಿತರಿದ್ದರು.