ಸುವರ್ಣಶ್ರೀ, ಜಾನಪದ ವಿಭೂತಿ ವಾರ್ಷಿಕ ಪ್ರಶಸ್ತಿ ಪ್ರಕಟ; ನ.16, 17ಕ್ಕೆ ವಿಭೂತಿಪುರ ಮಠದಲ್ಲಿ ಪ್ರಶಸ್ತಿ ಪ್ರದಾನ

award
Published on

ಬೆಂಗಳೂರು: ವಿಭೂತಿಪುರ ಮಠದಿಂದ ಪ್ರತಿವರ್ಷ ಕೊಡಮಾಡುವ ಸುವರ್ಣಶ್ರೀ ಮತ್ತು ಜಾನಪದ ವಿಭೂತಿ 2025ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಶಿಕಣ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗಾಗಿ ನಾಡೋಜ ಡಾ. ವೂಡೇ ಪಿ. ಕೃಷ್ಣರವರನ್ನು ಸುವರ್ಣಶ್ರೀ ಪ್ರಶಸ್ತಿಗೆ ಮತ್ತು ಜೋಗತಿ ನೃತ್ಯದ ಮೂಲಕ ಏಡ್ಸ್ ಮತ್ತಿತರ ಮಾರಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರಸಿದ್ಧರಾಗಿರುವ ಕಲಾವಿದ ರಾಚಯ್ಯ ವೀರಭದ್ರಯ್ಯ ಅವರು ಜಾನಪದ ವಿಭೂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶ್ರೀಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ಸುವರ್ಣಶ್ರೀ ಪ್ರಶಸ್ತಿಯು 50 ಸಾವಿರ ನಗದು, ಕಂಚಿನ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಒಳಗೊಂಡಿದ್ದು, ಜಾನಪದ ವಿಭೂತಿ ಪ್ರಶಸ್ತಿಯು 25 ಸಾವಿರ ನಗದು, ತಾಮ್ರದ ಪ್ರಶಸ್ತಿಪತ್ರ ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ.

ನ.16 ರಂದು ಸಂಜೆ 6ಕ್ಕೆ ವಿಭೂತಿಪುರ ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯುವ ಜಾನಪದೋತ್ಸವ ಕಾರ್ಯಕ್ರಮದಲ್ಲಿ ಜಾನಪದ ವಿಭೂತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂದಿನ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.

ನ.17 ರಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಸುವರ್ಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ನೊಣವಿನಕೆರೆಯ ಡಾ. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಕೊಟ್ಟೂರು ಶ್ರೀಗಳು, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ, ಬಸವಾದಿ ಶರಣರ ಮತ್ತು ಲಿಂಗೈಕ್ಯ ಸುವರ್ಣಲಿಂಗ ಶಿವಾಚಾರ್ಯ ಸ್ವಾಮಿಗಳ ಸಂಸ್ಮರಣೋತ್ಸವ ಹಾಗೂ ಮತ್ತಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net