ಮಂಡ್ಯದಲ್ಲಿ ಶುರುವಾಯ್ತು ಮಕ್ಕಳ ಕಳ್ಳರ ಭೀತಿ! ಅಲ್ಲಿ ನಡೆದದ್ದೇನು?

cctv
Published on

ಮಂಡ್ಯ: ಮಂಡ್ಯದ ಜನರಲ್ಲಿ ಮಕ್ಕಳ ಕಳ್ಳರ ಆತಂಕ ಹೆಚ್ಚಾಗಿದ್ದು ಕಿರುಗಾವಲು ಗ್ರಾಮದಲ್ಲಿ ಮಗು ಕಳ್ಳತನ ಯತ್ನ ಮಾಡಲಾಗಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಿನ್ನೆ‌ ರಾತ್ರಿ 8.30ರಲ್ಲಿ ಬೈಕ್‌ನಲ್ಲಿ ಇಬ್ಬರು ಮುಸುಕುಧಾರಿಗಳು ಬಂದಿದ್ದರು. ಈ ಸಂದರ್ಭ ಮನೆ‌ ಮುಂಭಾಗದಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗು ಬಳಿಗೆ ಈ ಅಪರಿಚಿತ ವ್ಯಕ್ತಿಗಳು ತೆರಳಿದ್ದಾರೆ. ಈ ಸಂದರ್ಭ ಅಪರಿಚಿತ ಮುಸುಕುಧಾರಿ ವ್ಯಕ್ತಿಗಳನ್ನು ಕಂಡು ಮಗು ಕಿರುಚಿದೆ.

ಮಗು ಕಿರುಚುತ್ತಿದ್ದಂತೆಯೇ ಬಂದ ದಾರಿಯಲ್ಲೇ ಮುಸುಕುಧಾರಿಗಳು ವಾಪಾಸ್ ಆಗಿದ್ದಾರೆ. ಅಪರಿಚಿತ ವ್ಯಕ್ತಿಗಳು ಮುಸುಕು ಧರಿಸಿ ಬೈಕ್‌ನಲ್ಲಿ ಬರುವ, ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆ ಬಳಿಕ ಪೋಷಕರಲ್ಲಿ ಮಕ್ಕಳ ಕಳ್ಳರ ಆತಂಕ ಮನೆ ಮಾಡಿದೆ.

ಈ ಬಗ್ಗೆ ಸ್ಥಳೀಯರು 'ನಿನ್ನೆ ಮಧ್ಯಾಹ್ನವೂ ಪೌಡರ್ ಮಾರುವ‌ ನೆಪದಲ್ಲಿ ಅದೇ ವ್ಯಕ್ತಿಗಳು ಬಂದಿದ್ರು. ಮತ್ತೊಮ್ಮೆ ರಾತ್ರಿ ವೇಳೆ ಅದೇ ಬೀದಿಯಲ್ಲಿ ಬೈಕ್‌ನಲ್ಲಿ ಬಂದಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದೀಗ ಪೊಲೀಸರು ಮುಸುಕುಧಾರಿಗಳ ಪತ್ತೆಗೆ ಮುಂದಾಗಿದ್ದು ಮಗು ಕಳವಿಗೆ ಬಂದಿದ್ರಾ ಅಥವಾ ಮನೆಗಳ್ಳತನಕ್ಕೆ ಬಂದಿದ್ರಾ ಎಂಬ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net