

ಬೆಂಗಳೂರು: ಮಹಾನಗರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಶಂಕಿತ ಆರೋಪಿಯನ್ನು ಕೇರಳದಿಂದ ಬಂಧಿಸಿ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಕರೆತರಲಾಗಿದೆ ಎಂದು ಬೆಂಗಳೂರು ಸಿಟಿ ಆ್ಯಂಟಿ ಟೆರರ್ ಸೆಲ್ ಮೂಲಗಳು ತಿಳಿಸಿವೆ.
ಕೇರಳದ ಕೊಚ್ಚಿನ್ನಿಂದ ಆರೋಪಿಯನ್ನು ಬೆಳಗ್ಗೆ 6.40ರ ಇಂಡಿಗೋ ವಿಮಾನದ ಮೂಲಕ ದೇವನಹಳ್ಳಿಗೆ ಕರೆತಂದಿರುವ ಪೊಲೀಸರು, ಬಳಿಕ ಎಫ್ಎಸ್ಎಲ್ಗೆ ಆತನನ್ನು ಕರೆದೊಯ್ದಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳ ನೆರವಿನೊಂದಿಗೆ ಬೆಂಗಳೂರು ಆ್ಯಂಟಿ ಟೆರರ್ ಸೆಲ್ ನಿರ್ದೇಶನದಂತೆ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತ್ತು. ಶೋಯಬ್ 12 ವರ್ಷ ಕಾಲ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು.
ಇದನ್ನೂ ಓದಿ: ಕೇರಳಕ್ಕೆ ತೆರಳಿದ ಶಂಕಿತ ಉಗ್ರ ಮದನಿ
ಬೆಂಗಳೂರಿನಲ್ಲಿ 2008ರ ಜುಲೈ 25ರಂದು ಒಂಭತ್ತು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು. ದಾಳಿಯಲ್ಲಿ ಒಬ್ಬ ಮೃತಪಟ್ಟು, 20 ಜನ ಗಾಯಗೊಂಡಿದ್ದರು. ಕೇರಳದ ವಿವಾದಿತ ರಾಜಕೀಯ, ಧಾರ್ಮಿಕ ನಾಯಕ ಪಿಡಿಪಿಯ ಅಬ್ದುಲ್ ನಾಸಿರ್ ಮದನಿಯನ್ನೂ ಪೊಲೀಸರು ಬಂಧಿಸಿದ್ದರು. (ದಿಗ್ವಿಜಯ ನ್ಯೂಸ್)