

ಪಟನಾ: ಬಿಹಾರದಲ್ಲಿ ಇತ್ತೀಚೆಗಷ್ಟೇ ರಚನೆಯಾದ ಎನ್ಡಿಎ ಸರ್ಕಾರವನ್ನು ಪತನಗೊಳಿಸುವುದಕ್ಕೆ ಲಾಲು ಯಾದವ್ ಪ್ರಯತ್ನಿಸುತ್ತಿದ್ದಾರೆ. ಅವರು ಸೆರೆವಾಸದಲ್ಲಿದ್ರೂ ಅಲ್ಲಿಂದಲೇ ರಾಜಕೀಯ ಶುರುಮಾಡಿದ್ದು, ಮಗನನ್ನು ಮುಖ್ಯಮಂತ್ರಿಯನ್ನಾಗಿಸುವ ಚಿಂತನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಬಂದಿದೆ. ಇದಕ್ಕಾಗಿ ಅವರು ನೇರವಾಗಿ ಕಣಕ್ಕೆ ಇಳಿದಿದ್ದು, ಎನ್ಡಿಎ ಶಾಸಕರ ಜತೆಗೆ ವ್ಯವಹಾರ ಕುದುರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಂದು ಸುಶೀಲ್ ಕುಮಾರ್ ಮೋದಿ ನಿನ್ನೆ ಆರೋಪಿಸಿದ್ದರು.
ಈ ಸಂಬಂಧ ಟ್ವೀಟ್ ಕೂಡ ಮಾಡಿದ್ದ ಸುಶೀಲ್ ಮೋದಿ, ತಾವು ಲಾಲು ಜತೆಗೆ ಮಾತನಾಡಿದ ಫೋನ್ ನಂಬರ್ ಅನ್ನು ಕೂಡ ಬಹಿರಂಗಪಡಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇಂದು ಸುಶೀಲ್ ಮೋದಿ ಅವರು, ಲಾಲೂ ಯಾದವ್ ತಮ್ಮ ಅಸಲೀಯತ್ತನ್ನು ತೋರಿಸಿದ್ರು ಎಂಬ ಶೀರ್ಷಿಕೆಯೊಂದಿಗೆ ಆಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ.
ಇದು ರಾಜಕೀಯವಾಗಿ ಭಾರಿ ಸಂಚಲನ ಸೃಷ್ಟಿಸಿದ್ದು, ಅದರಲ್ಲಿ ಲಾಲು ಯಾದವ್ ತಮ್ಮ ಪಿಎ ಮೂಲಕ ಎನ್ಡಿಎ ಶಾಸಕರನ್ನು ಸಂಪರ್ಕಿಸಿ ವಿಧಾನ ಸಭಾ ಸ್ಪೀಕರ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮಹಾಗಟಬಂಧನ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳುವ ಮಾತುಗಳು ದಾಖಲಾಗಿವೆ. ಇದರ ಸಾರವನ್ನೆ ಸುಶೀಲ್ ಮೋದಿ ಟ್ವೀಟ್ ನಲ್ಲೂ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಈ ಆಡಿಯೋ ಬಗ್ಗೆ ಅಥವಾ ಸುಶೀಲ್ ಮೋದಿ ಅವರ ಟ್ವೀಟ್ ಬಗ್ಗೆ ಲಾಲು ಯಾದವ್ ಅಥವಾ ಆರ್ಜೆಡಿ ಇನ್ನೂ ಪ್ರತಿಕ್ರಿಯಿಸಿಲ್ಲ. (ಏಜೆನ್ಸೀಸ್)