ಸೂರ್ಯಕುಮಾರ್ ಯಾದವ್ ಸಿಡಿಸಿದ ಬೊಂಬಾಟ್ ಸಿಕ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ

Surya Kumar Yadav
Published on

ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟಿ-20 ಪಂದ್ಯವನ್ನು ಭಾರತ ತಂಡ 6 ವಿಕೆಟ್​​ಗಳಿಂದ ಜಯ ದಾಖಲಿಸಿಕೊಂಡಿತು. 69 ರನ್​ ಗಳಿಸಿ ಸೂರ್ಯಕುಮಾರ್ ಯಾದವ್ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು. 36 ಬಾಲ್​ ಆಡಿದ ಸೂರ್ಯಕುಮಾರ್ 5 ಸಿಕ್ಸರ್, 5 ಬೌಂಡರಿ ಮೂಲಕ ಅರ್ಧಶತಕದ ಆಟವಾಡಿದ್ದರು.

ನಾಲ್ಕನೇ ವಿಕೆಟ್​ಗೆ ವಿರಾಟ್​ ಕೊಹ್ಲಿ ಜತೆಯಾದ ಸೂರ್ಯಕುಮಾರ್ ವೇಗವಾಗಿಯೇ ಬ್ಯಾಟ್​ ಬೀಸಲು ಆರಂಭಿಸಿದರು. ಆಸ್ಟ್ರೇಲಿಯಾ ಬೌಲರ್​ಗಳಿಗೆ ಆರಂಭದಿಂದಲೂ ಆಕ್ರಮಣಕಾರಿಯಾಗಿ ಕಾಣಿಸಿಕೊಂಡ ಸೂರ್ಯಕುಮಾರ್, ನೋಡನೋಡುತ್ತಲೇ ಅರ್ಧ ಶತಕವನ್ನೂ ಪೂರೈಸಿದರು.

ಸೂರ್ಯ ಕುಮಾರ್ 45 ರನ್​ ಗಳಿಸಿ ಅರ್ಧಶತಕದ ಹೊಸ್ತಿಲಿನಲ್ಲಿದ್ದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದುದು, ಸ್ಪಿನ್ ಬೌಲರ್ ಆ್ಯಡಂ ಝಂಪಾ. ಅವರ ಬಾಲ್​ಗೆ ಸಿಕ್ಸರ್ ಸಿಡಿಸುವ ಮೂಲಕ ಸೂರ್ಯಕುಮಾರ್ ಅರ್ಧಶತಕ ಗಳಿಸಿದರು. ಈ ವೇಳೆ ಝಂಪಾ ಬೌಲಿಂಗ್​ಗೆ ಸೂರ್ಯಕುಮಾರ್ ಸಿಡಿಸಿದ ಸ್ಟೈಲಿಶ್ ಸಿಕ್ಸರ್​ಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೂರ್ಯ ಸಿಡಿಸಿದ ಸಿಕ್ಸರ್​ನ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡುತ್ತಿದ್ದಂತೆ ಇದುವರೆಗೆ 3 ಲಕ್ಷಕ್ಕಿಂತಲೂ ಅಧಿಕ ಜನ ವೀಕ್ಷಿಸಿದ್ದಾರೆ ಮತ್ತು ರೀಟ್ವೀಟ್ ಮಾಡುತ್ತಲೇ ಇದ್ದಾರೆ.

ಆ್ಯಡಂ ಝಂಪಾ ಫುಲ್​ಟಾಸ್ ಬಾಲ್ ಮಾಡಿದರು. ಅರ್ಧಶತಕದ ಸನಿಹದಲ್ಲಿದ್ದ ಸೂರ್ಯಕುಮಾರ್ ಒಂದು ಹೆಜ್ಜೆ ಮುಂದೆ ಬಂದು ಸಿಕ್ಸರ್ ಸಿಡಿಸಿದ್ದಾರೆ. ಧೋನಿಯ ಹೆಲಿಕಾಫ್ಟರ್​ ಶಾಟ್​ ಸ್ಟೈಲಿನಲ್ಲಿ ಸೂರ್ಯಕುಮಾರ್ ಸಿಕ್ಸರ್ ಸಿಡಿಸಿ, ಅರ್ಥಶತಕವನ್ನೂ ಪೂರೈಸಿದರು.

ಟಿ-20 ಕ್ರಿಕೆಟ್​​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಸೂರ್ಯಕುಮಾರ್, ಇದುವರೆಗೆ 31 ಟಿ-20 ಪಂದ್ಯ ಆಡಿದ್ದಾರೆ. 37.04 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ, 7 ಅರ್ಧಶತಕ, 1 ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 117 ರನ್ ಬಾರಿಸಿರುವುದು ಇದುವರೆಗಿನ ಬೆಸ್ಟ್ ಸ್ಕೋರ್. ಸದ್ಯ ದಿ ಬೆಸ್ಟ್​ ಟಿ-20 ಕ್ರಿಕೆಟರ್ ಆಗಿರುವ ಸೂರ್ಯಕುಮಾರ್ ಯಾದವ್ ಟಿ-20 ರ‍್ಯಾಂಕಿಂಗ್​ನಲ್ಲಿ ಅಗ್ರ 3 ನೇ ಸ್ಥಾನದಲ್ಲಿದ್ದಾರೆ.

ಟಿ-20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಗಮನಾರ್ಹವಾಗಿ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ನಾಲ್ಕನೇ ವಿಕೆಟ್​​ನಲ್ಲಿ ಸೂರ್ಯಕುಮಾರ್ ಬ್ಯಾಟ್​ ಬೀಸುವುದು ಪಕ್ಕಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net