

ಬಂಟ್ವಾಳ(ದ.ಕ.): ನಾಗರಹಾವಿನ ಹೊಟ್ಟೆ ಸೇರಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದು 15 ದಿನಗಳ ಆರೈಕೆಯ ಬಳಿಕ ಅರಣ್ಯಕ್ಕೆ ಬಿಡಲಾಗಿದೆ.
ಉರಗ ತಜ್ಞ ಸ್ನೇಕ್ ಕಿರಣ್, ಪಶುವೈದ್ಯರಾದ ಡಾ.ಯಶಸ್ವಿ ನಾರಾವಿ ಹಾಗೂ ಅರಣ್ಯ ಇಲಾಖೆಯ ಸಕಾಲಿಕ ಕಾರ್ಯಾಚರಣೆಯಿಂದ ಪ್ರಾಣ ಸಂಕಟದಲ್ಲಿ ನರಳುತ್ತಿದ್ದ ನಾಗರಹಾವು ಬದುಕುಳಿದಿದೆ.
ಕಾವಳಪಡೂರು ಗ್ರಾಪಂ ವ್ಯಾಪ್ತಿಯ ವಗ್ಗದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನ ಸಮೀಪದಲ್ಲಿರುವ ಕಾವಳಪಡೂರು ಗ್ರಾಪಂ ಉಪಾಧ್ಯಕ್ಷೆ ವಸಂತಿ ಎಂಬುವರ ಮನೆ ಬಳಿಯ ಬಿಲದಲ್ಲಿ ಒಳನುಗ್ಗಿದ ನಾಗರಹಾವು ಹೊರಬರಲಾಗದೆ ಒದ್ದಾಡುತ್ತಿತ್ತು. ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಜೂನ್ 6ರಂದು ಉರಗ ತಜ್ಞ ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಕಿರಣ್ ಹಾವನ್ನು ಬಿಲದಿಂದ ಹೊರತೆಗೆದು ಮೂರು ದಿನ ಪ್ರಾಥಮಿಕ ಆರೈಕೆ ನೀಡಿ ರಕ್ಷಿಸಿದ್ದಾರೆ. ಹಾವಿನ ತಲೆ ಭಾಗದಲ್ಲಿ ಗಾಯವಾಗಿರುವುದು ಹಾಗೂ ಚರ್ಮ ಹರಿದಿರುವುದನ್ನು ಗಮನಿಸಿ ಮಂಗಳೂರಿನ ಪಶುವೈದ್ಯರಾದ ಯಶಸ್ವಿ ನಾರಾವಿ ಅವರ ಬಳಿ ತಂದಿದ್ದರು. ಗಾಯಕ್ಕೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾವಿನ ಹೊಟ್ಟೆ ಉಬ್ಬಿರುವುದನ್ನು ಕಂಡು ಎಕ್ಸ್‌ರೇ ತೆಗೆದಿದ್ದಾರೆ.
ಈ ಸಂದರ್ಭ ಹಾವಿನ ಹೊಟ್ಟೆಯೊಳಗೆ ಪ್ಲಾಸ್ಟಿಕ್ ವಸ್ತು ಇರುವುದು ಗಮನಕ್ಕೆ ಬಂದಿದೆ. ತಕ್ಷಣ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆ ಸೇರಿದ್ದ ಪ್ಲಾಸ್ಟಿಕ್ ಡಬ್ಬವನ್ನು ವೈದ್ಯರು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ 15 ದಿನಗಳ ಕಾಲ ಆರೈಕೆ ಮಾಡಿ ಹಾವು ಚೇತರಿಸಿಕೊಂಡ ಬಳಿಕ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಜೂನ್ 19ರಂದು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.