ರೈನಾ ಸಂಬಂಧಿಕರ ಮೇಲಿನ ದಾಳಿ ಪ್ರಕರಣವನ್ನು ಕೊನೆಗೂ ಭೇದಿಸಿದ ಪಂಜಾಬ್ ಪೊಲೀಸರು

raina family web
Published on

ಚಂಡೀಗಢ: ಕ್ರಿಕೆಟಿಗ ಸುರೇಶ್ ರೈನಾ ಅವರ ಸಂಬಂಧಿಕರ ಮೇಲೆ ದಾಳಿ ನಡೆದಿದ್ದ ಪ್ರಕರಣವನ್ನು ಪಂಜಾಬ್ ಪೊಲೀಸರು ಕೊನೆಗೂ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಜ್ಯ ಗ್ಯಾಂಗ್‌ನ ಸದಸ್ಯರಾಗಿರುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬುಧವಾರ ತಿಳಿಸಿದ್ದಾರೆ.

ಕಳೆದ ಆಗಸ್ಟ್ 20ರಂದು ಪಠಾಣ್‌ಕೋಟ್‌ನಲ್ಲಿರುವ ರೈನಾ ಸಂಬಂಧಿಕರ ಮನೆಯ ಮೇಲೆ ದರೋಡೆಕೋರರ ಗ್ಯಾಂಗ್ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ಇದರಿಂದ ರೈನಾ ಅವರ ಮಾವ ಅಶೋಕ್ ಕುಮಾರ್ ಮತ್ತು ಸೋದರ ಸಂಬಂಧಿ ಕೌಶಲ್ ಕುಮಾರ್ ಮೃತಪಟ್ಟಿದ್ದರೆ, ಅವರ ಅತ್ತೆ (ತಂದೆಯ ಸಹೋದರಿ) ಆಶಾರಾಣಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಆದರೆ ಘಟನೆ ನಡೆದು ಕೆಲದಿನಗಳಾದರೂ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ವಶಕ್ಕೆ ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಸುರೇಶ್ ರೈನಾ ಅವರು, ತಮ್ಮ ಕುಟುಂಬಕ್ಕೆ ಬೇಗನೆ ನ್ಯಾಯ ಒದಗಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಟ್ವಿಟರ್ ಮೂಲಕ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಅಮರಿಂದರ್ ಪ್ರಕರಣದ ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದರು.

ಅಂತಾರಾಜ್ಯ ದರೋಡೆಕೋರರ ಗ್ಯಾಂಗ್‌ನ ಇನ್ನೂ 11 ಸದಸ್ಯರಿಗಾಗಿ ತೀವ್ರವಾದ ಶೋಧ ನಡೆದಿದೆ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ. ಬಂಧಿತರ ಆರೋಪಿಗಳಿಂದ 2 ಚಿನ್ನದ ಉಂಗುರ, ಚಿನ್ನದ ಸರ ಮತ್ತು 1,530 ರೂ. ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಸಾವನ್, ಮೊಹಬ್ಬತ್ ಮತ್ತು ಶಾರುಖ್ ಖಾನ್ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಪಂಜಾಬ್‌ನ ವಿವಿಧ ಭಾಗಗಳಲ್ಲಿ ಹಲವಾರು ಅಪರಾಧ ಕೃತ್ಯಗಳನ್ನು ಎಸಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸುರೇಶ್ ರೈನಾ ಧನ್ಯವಾದ

ಸಂಬಂಧಿಕರ ಮೇಲಿನ ದಾಳಿ ಪ್ರಕರಣವನ್ನು ಭೇದಿಸಿರುವುದಕ್ಕೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಪೊಲೀಸರಿಗೆ ಸುರೇಶ್ ರೈನಾ ಧನ್ಯವಾದ ಸಲ್ಲಿಸಿದ್ದಾರೆ. ಸುರೇಶ್ ರೈನಾ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ತ್ಯಜಿಸಿ ಐಪಿಎಲ್‌ನಿಂದ ಹೊರನಡೆಯಲು ಸಂಬಂಧಿಕರ ಮೇಲಿನ ಈ ದಾಳಿ ಪ್ರಕರಣದ ಆಘಾತವೇ ಕಾರಣ ಎಂದು ಮೊದಲಿಗೆ ವರದಿಯಾಗಿತ್ತು.

‘ಮೂವರು ಕ್ರಿಮಿನಲ್‌ಗಳನ್ನು ಬಂಧಿಸಿರುವ ತನಿಖಾಧಿಕಾರಿಗಳನ್ನು ನಾನಿಂದು ಬೆಳಗ್ಗೆ ಭೇಟಿಯಾದೆ. ಅವರ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ನಮಗೆ ಆದ ನಷ್ಟವನ್ನು ಪುನಃ ಪಡೆದುಕೊಳ್ಳಲಾಗದು. ಆದರೆ ಇದರಿಂದ ಮುಂಬರುವ ದಿನಗಳಲ್ಲಿ ಕ್ರೈಮ್ ನಡೆಯುವುದನ್ನು ತಡೆಗಟ್ಟಬಹುದಾಗಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಪೊಲೀಸರೇ ನಿಮ್ಮ ಎಲ್ಲ ಸಹಾಯಕ್ಕೆ ಧನ್ಯವಾದಗಳು’ ಎಂದು ಸುರೇಶ್ ರೈನಾ ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net