ಸುರೇಶ್ ರೈನಾ ನಿವೃತ್ತಿಗೆ ಪತ್ನಿ ಪ್ರಿಯಾಂಕಾ ಭಾವನಾತ್ಮಕ ಸಂದೇಶ

raina wife
Published on

ಬೆಂಗಳೂರು: ಬೆನ್ನುಬೆನ್ನಿಗೆ ನಿವೃತ್ತಿ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ ಆತ್ಮೀಯ ಗೆಳೆಯರಾದ ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಅವರಿಗೆ ಪತ್ನಿಯಿಂದ ಭಾವುಕ ಸಂದೇಶ ದೊರೆತಿದೆ. ಧೋನಿ ಯಾವಾಗಲೂ ಭಾವನೆಗಳ ನಿಯಂತ್ರಣಕ್ಕೆ ಹೆಸರಾದವರು. ಆದರೆ ತಮ್ಮ ನೆಚ್ಚಿನ ಆಟಕ್ಕೆ ವಿದಾಯ ಪ್ರಕಟಿಸುವಾಗ ಖಂಡಿತವಾಗಿಯೂ ಅವರು ಕಣ್ಣೀರನ್ನು ತಡೆಹಿಡಿದಿರುತ್ತಾರೆ ಎಂದು ಅವರ ಪತ್ನಿ ಸಾಕ್ಷಿ ಸಿಂಗ್ ಹೇಳಿದ್ದರೆ, ಅವರ ಬೆನ್ನಲ್ಲೇ ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಚೌಧರಿ ಕೂಡ ಪತಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ.

‘ನಾನಿನ್ನೂ ಇದನ್ನು ಅರಗಿಸಿಕೊಳ್ಳುತ್ತಿದ್ದರೂ, ನಾನು ಹೆಮ್ಮೆ, ಅಪಾರವಾದ ಹೆಮ್ಮೆಯಿಂದ ಬೀಗುತ್ತಿದ್ದೇನೆ ಎಂದು ಹೇಳಬಲ್ಲೆ. ನನ್ನ ಹೃದಯ ನಿಮ್ಮ ಬಗ್ಗೆ ಗೌರವ ಮತ್ತು ಕೃತಜ್ಞತೆಯಿಂದ ತುಂಬಿದೆ’ ಎಂದು ಪ್ರಿಯಾಂಕಾ ಚೌಧರಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. ರೈನಾ-ಪ್ರಿಯಾಂಕಾ 2015ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. ದಂಪತಿಗೆ ಓರ್ವ ಪುತ್ರಿ ಮತ್ತು ಪುತ್ರ ಇದ್ದಾರೆ.

ಧೋನಿ ನಿವೃತ್ತಿ ಹಿಂದೆಯೇ ಶನಿವಾರ ನಾನೂ ಅವರ ಹಿಂದೆಯೇ ಹೋಗುವುದಾಗಿ ಶನಿವಾರ ಸಂಕ್ಷಿಪ್ತವಾಗಿ ವಿದಾಯ ಪ್ರಕಟಿಸಿದ್ದ ಸುರೇಶ್ ರೈನಾ, ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ನಿವೃತ್ತಿಯ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ‘ಸಾಕಷ್ಟು ಮಿಶ್ರ ಭಾವನೆಗಳೊಂದಿಗೆ ನಾನು ನನ್ನ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವೆ. ಭಾರತ ತಂಡ ಪ್ರವೇಶಿಸುವುದಕ್ಕೆ ಮುನ್ನ ನಾನು ಸಣ್ಣ ಹುಡುಗನಾಗಿದ್ದಾಗಿನಿಂದಲೂ ಕ್ರಿಕೆಟ್ ಆಟವನ್ನು ಪ್ರತಿ ಬೀದಿಯಲ್ಲೂ ಬದುಕಿರುವೆ. ಆಗ ಕ್ರಿಕೆಟ್ ಆಟವಷ್ಟೇ ನನಗೆ ಗೊತ್ತಿತ್ತು. ದೇವರಿಂದ ಪಡೆದ ಪ್ರತಿಯೊಂದಕ್ಕೂ ನಾನು ಪ್ರತಿದಿನ ಧನ್ಯವಾದಗಳನ್ನು ಹೇಳಿರುವೆ. ಜನರ ಪ್ರೀತಿಯನ್ನೂ ಮರೆತಿಲ್ಲ’ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ.

ಧೋನಿ ಜತೆಗೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸಚಿನ್ ತೆಂಡುಲ್ಕರ್, ಹರ್ಭಜನ್ ಸಿಂಗ್ ಮತ್ತು ವಿರಾಟ್ ಕೊಹ್ಲಿಗೆ ಅವರು ವಿಶೇಷವಾದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಕೆಲ ಅತ್ಯುತ್ತಮವಾದ ಆಟಗಾರರೊಂದಿಗೆ ಆಡಿರುವ ಹೆಮ್ಮೆ ತಮಗಿದೆ ಎಂದೂ ರೈನಾ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net