

IPL 2025: ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್, 18ನೇ ಆವೃತ್ತಿಯಲ್ಲಿ ಯಾರೂ ಊಹಿಸದ ಕಳಪೆ ಪ್ರದರ್ಶನವನ್ನು ನೀಡಿದೆ. ಇದು ಕ್ರಿಕೆಟ್ ಪ್ರಿಯರನ್ನು ಭಾರೀ ಅಚ್ಚರಿಗೆ ದೂಡಿದ್ದು, ಫ್ರಾಂಚೈಸಿಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಸೀಸನ್ನಲ್ಲಿ ಆಡಿರುವ ಒಟ್ಟು 9 ಪಂದ್ಯಗಳಲ್ಲಿ 7 ಹೀನಾಯ ಸೋಲು ದಾಖಲಿಸಿರುವ ಚೆನ್ನೈ ಪಡೆ, ಕೇವಲ ಎರಡೇ ಎರಡು ಪಂದ್ಯವನ್ನು ಮಾತ್ರ ಗೆದ್ದು ಬೀಗಿದೆ. ಈಗಾಗಲೇ ಪ್ಲೇಆಫ್ ಆಸೆಗೆ ಎಳ್ಳು-ನೀರು ಬಿಟ್ಟಿರುವ ಸಿಎಸ್ಕೆ, ಇನ್ನೂ ಐದು ಪಂದ್ಯಗಳನ್ನು ಆಡಲು ಎದುರುನೋಡುತ್ತಿದೆ. ಈ ಮಧ್ಯೆ ಸಿಎಸ್ಕೆ ವಿಫಲ ಕುರಿತು ಸುರೇಶ್ ರೈನಾ ಮೌನ ಮುರಿದಿದ್ದಾರೆ.
ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿರುವ ರುತುರಾಜ್ ಸ್ಥಾನವನ್ನು ತುಂಬಿರುವ ಮಹೇಂದ್ರ ಸಿಂಗ್ ಧೋನಿ, ಎರಡು ವರ್ಷಗಳ ನಂತರ ಮತ್ತೊಮ್ಮೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭದಲ್ಲಿ ಸೋಲು ಕಂಡ ಸಿಎಸ್ಕೆ, ಧೋನಿ ಕ್ಯಾಪ್ಟನ್ಸಿಯಲ್ಲಿಯೂ ಸತತ ಸೋಲು ನೋಡುತ್ತಿರುವುದು ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಇನ್ನು ಇಷ್ಟಕ್ಕೆಲ್ಲ ಕಾರಣ ಫ್ರಾಂಚೈಸಿ ಎಂದು ದೂರಿರುವ ರೈನಾ, ಹರಾಜಿನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಿಎಸ್ಕೆ ಕೈಚೆಲ್ಲಿತು ಎಂದಿದ್ದಾರೆ.
"ಸಿಎಸ್ಕೆ ಆಟಗಾರರು ಮುಂದೆ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಅತ್ಯಂತ ಕಳಪೆ ಪ್ರದರ್ಶನ. ಈ ಹಿಂದೆ ತಂಡದಲ್ಲಿದ್ದ ಆಟಗಾರರು ಸಿಎಸ್ಕೆ ಪ್ಲೇಆಫ್ಗೆ ತಲುಪುವ ಹಾಗೇ ಮಾಡುತ್ತಿದ್ದರು. ಆ ಮಟ್ಟಿಗಿನ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಒಳ್ಳೆಯ ಆಯ್ಕೆ ಫ್ರಾಂಚೈಸಿ ಮಾಡಿಕೊಳ್ಳಲಿಲ್ಲ. ಇಶಾನ್ ಕಿಶನ್ ಮತ್ತು ರಿಷಭ್ ಪಂತ್ರನ್ನು ಅಂದೇ ತಂಡಕ್ಕೆ ಖರೀದಿ ಮಾಡಬೇಕಿತ್ತು. ಆದರೆ, ಇವರು ಮಾಡಲಿಲ್ಲ" ಎಂದರು.
"ಧೋನಿ ನಂತರ ಸಿಎಸ್ಕೆಗೆ ಮುಂದಿನ ವಿಕೆಟ್ ಕೀಪರ್ ಯಾರು? ಈ ಪ್ರಶ್ನೆಗೆ ಅವರಲ್ಲಿ ಉತ್ತರವೇ ಇಲ್ಲ. ಬ್ಯಾಟರ್ಗಳು ಸಿಕ್ಕಾಪಟ್ಟೆ ಡಾಟ್ ಬಾಲ್ ಆಡುತ್ತಿದ್ದಾರೆ. ಅಸಲಿಗೆ ಈ ಸೀಸನ್ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಆಡಿರುವ ತಂಡ ಸಿಎಸ್ಕೆ ಆಗಿದೆ. ಪವರ್ಪ್ಲೇನಲ್ಲಿ ಬ್ಯಾಟಿಂಗ್ ಮಾಡಲು ತೀರ ಹೆಣಗಾಡುತ್ತಿದ್ದಾರೆ. ಏಕಂದರೆ, ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲುತ್ತಿಲ್ಲ. ಡೇವಾನ್ ಕಾನ್ವೆ ಉತ್ತಮ ಓಪನಿಂಗ್ ನೀಡುತ್ತಿದ್ದರು. ಆದ್ರೆ, ತಂದೆಯ ಅಗಲಿಕೆಯಿಂದ ಅವರು ತಂಡದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ" ಎಂದು ರೈನಾ ಹೇಳಿದ್ದಾರೆ,(ಏಜೆನ್ಸೀಸ್).