

ಮಂಡ್ಯ: ಚನ್ನರಾಯಪಟ್ಟಣದ ಮಾಜಿ ಎಂಎಲ್‌ಎ ಪುಟ್ಟೇಗೌಡ ಅವರ ಮನೆಯಲ್ಲಿ ಅಡುಗೆ ಮಾಡಿಕೊಂಡು ಹಾಗೂ ತೃತೀಯ ದರ್ಜೆ ಗುತ್ತಿಗೆದಾರನಾಗಿ ತುಂಡು ಕೆಲಸ ಮಾಡಿಕೊಂಡಿದ್ದ ನಿಮ್ಮನ್ನು ನಾಯಕನನ್ನಾಗಿ ಮಾಡಿದ್ದು ನೀವು ತೆಗಳುತ್ತಿರುವ ಎಚ್.ಡಿ. ಕುಮಾರಸ್ವಾಮಿ ಅವರೇ ಎಂಬುದನ್ನು ಮರೆಯಬೇಡಿ ಎಂದು ಚಲುವರಾಯಸ್ವಾಮಿ ಅವರನ್ನು ಮಾಜಿ ಶಾಸಕ ಸುರೇಶ್‌ಗೌಡ ಛೇಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ತಾಲೂಕಿನ ಕದಬಳ್ಳಿ ಏತ ನೀರಾವರಿ ಜಾಕ್ವೆಲ್‌ಗೆ ಬಿಡುಗಡೆಯಾಗಿದ್ದ 11 ಕೋಟಿ ರೂ, ಎಲೆಕೊಪ್ಪ ಕೆರೆ ಏರಿಗೆ ಬಿಡುಗಡೆಯಾಗಿದ್ದ 5 ಕೋಟಿ ರೂ, ಬೆಳ್ಳೂರಿನ ಕುಡಿಯುವ ನೀರು ಯೋಜನೆಗೆ ಜಲಜೀವನ್ ಮಿಷನ್ ಯೋಜನೆಯಡಿ ಬಿಡುಗಡೆಯಾಗಿದ್ದ 80 ಕೋಟಿ ರೂ, ಕೋಟೆಬೆಟ್ಟ ರಸ್ತೆ ದುರಸ್ತಿ, ಹೀಗೆ ಅನೇಕ ಕೆಲಸಗಳನ್ನು ನಿಲ್ಲಿಸಿದ್ದಾರೆ. ಅವರ ಸ್ವಂತ ಗ್ರಾಮ ಇಜ್ಜಲಘಟ್ಟದವರು ನನಗೆ ಮತ ಹಾಕಿದರೆಂಬ ಒಂದೇ ಕಾರಣಕ್ಕೆ ಅವರ ಜಮೀನು ಅರಣ್ಯ ಪ್ರದೇಶಕ್ಕೆ ಸೇರಿದ್ದು ವಶಪಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಅಲ್ಲದೆ, ಇವರಿಗೆ ಆಗದವರ ವಿರುದ್ಧ ಜಾತಿನಿಂದನೆ ಕೇಸ್ ಹಾಕಿಸುತ್ತಿದ್ದಾರೆ.
ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆಗೆ ಅಡ್ಡಿಪಡಿಸಿದರು ಎಂದು ನಾನು ಮತ್ತು ನನ್ನ ಕುಟುಂಬದ ಹೆಸರನ್ನು ಸದನದಲ್ಲಿ ಸಚಿವರು ತೆಗೆದುಕೊಂಡಿದ್ದಾರೆ. ಆತ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ನಾನು ನಾಗಮಂಗಲದಲ್ಲೇ ಇರಲಿಲ್ಲ. ಅಂದು ಗೋವಾದಲ್ಲಿದ್ದೆ. ಆತನನ್ನು ಬೇರೆ ಆಸ್ಪತ್ರೆಗೆ ದಾಖಲಿಸಲು ನನ್ನ ಪತ್ನಿ ಮತ್ತು ಮಗಳು ಹೋಗಿದ್ದಾಗ, ಅದೇ ತಾನೇ ಗೋವಾದಿಂದ ಬಂದ ನಾನೂ ಸಹ ಅಲ್ಲಿಗೆ ಹೋದೆ ಅಷ್ಟೆ. ಆದರೆ, ಆ ನೌಕರ ವರ್ಗಾವಣೆಗೆ ಸಂಬಂಧಿಸಿದಂತೆ ಪತ್ರ ನೀಡಿದ್ದರೂ ನಾನು ಯಾವುದೇ ಪತ್ರ ನೀಡಿಲ್ಲ ಎಂದು ಸದನದಲ್ಲಿ ಹೇಳಿದ್ದಾರೆ. ಇವರು ಮಹಾನ್ ಸುಳ್ಳುಗಾರ ಎಂದು ಟೀಕಿಸಿದರು.