

ಅಮರಾವತಿ: ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅವರಿಗೆ ಪವನ್ ಕಲ್ಯಾಣ್ ಮೇಲಿನ ಮಮಕಾರ ಎಂತಹುದ್ದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಅಣ್ಣ - ಅತ್ತಿಗೆ ಪವನ್ ಅನ್ನು ತಮ್ಮ ಸ್ವಂತ ಮಗನಂತೆ ನೋಡಿಕೊಳ್ಳುತ್ತಾರೆ. ಚುನಾವಣಾ ಸಂದರ್ಭದಲ್ಲಿ ಪವನ್ ಗೆಲುವಿಗೆ ಶುಭ ಹಾರೈಸಲು ಚಿರಂಜೀವಿ ಕೂಡ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದರು. ಇದಲ್ಲದೆ, ಅವರು ತಮ್ಮ ಸಹೋದರನನ್ನು ಆರ್ಥಿಕವಾಗಿ ಬೆಂಬಲಿಸಿದರು. ಚುನಾವಣೆಯಲ್ಲಿ ಗೆದ್ದು ಉಪಮುಖ್ಯಮಂತ್ರಿಯಾದ ಪವನ್ ಗೆ ಚಿರು ದಂಪತಿ ಮರೆಯಲಾಗದ ಗಿಫ್ಟ್ ಕೊಟ್ಟು ಹಾರೈಸಿದ್ದಾರೆ.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಅತ್ತಿಗೆ ಸುರೇಖಾ ಕೊನಿಡೆಲಾ ಮಾಂಟ್ ಬ್ಲಾಂಕ್ ಪೆನ್ ಅನ್ನು ಉಡುಗೊರೆಯಾಗಿ ನೀಡಿದರು. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಚಿರಂಜೀವಿ, "ಪವನ್ ಕಲ್ಯಾಣ್‌ಗೆ ಅತ್ತಿಗೆಮ್ಮನ ಉಡುಗೊರೆ" ಎಂದು ಬರೆದುಕೊಂಡಿದ್ದಾರೆ.
"ನನ್ನ ಸಹೋದರ, ತೆಲುಗು ಜನರ ಆಕಾಂಕ್ಷೆಗಳು ನನಸಾಗಲಿ ಎಂದು ಆಶಿಸುತ್ತಾ" ಎಂದು ಚಿರಂಜೀವಿ ಹೇಳಿದ್ದಾರೆ. ಆ ಪೆನ್ 8000 ರೂ. ಬೆಲೆಬಾಳುತ್ತದೆ ಎನ್ನಲಾಗಿದೆ. ಪೆನ್ನಿನಿಂದ ಪವನ್ ಸಹಿ ಮಾಡಿದ್ದಾರೆ. ಅಂದಿನಿಂದ ಪವನ್ ಅಭಿಮಾನಿಗಳಿಗೆ ಸಹಿಮಾಡಿಕೊಡಲು ಆ ಪೆನ್ ಬಳಸುತ್ತಿದ್ದಾರೆ.
ಆಂಧ್ರ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರು ಪಿಠಾಪುರಂ ಕ್ಷೇತ್ರದಿಂದ ಶಾಸಕರಾಗಿ ಭಾರಿ ಬಹುಮತದೊಂದಿಗೆ ಗೆದ್ದಿರುವುದು ಗೊತ್ತೇ ಇದೆ. ಜನಸೇನಾ 21 ಶಾಸಕರು ಆರಿಸಿ ಬಂದಿದ್ದು, ಎರಡು ಸಂಸತ್ ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ.
ಅವರು ಇತ್ತೀಚೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದು, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಅರಣ್ಯ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಅವರ ಅಭಿಮಾನಿಗಳು, ನೆಟಿಜನ್‌ಗಳು ಜನಸೇನಾ ಬಗ್ಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.